ಎಲ್ಲ ಠಾಣೆಗಳಲ್ಲಿ ನೈಟ್ ಬೀಟ್ ವ್ಯವಸ್ಥೆ ಬಲಪಡಿಸಿ; ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಐಜಿಪಿ ರವಿಕಾಂತೇಗೌಡ ಸೂಚನೆ

5 HVR 9 B
Published on

ಹಾವೇರಿ: ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು (ನೈಟ್ ಬೀಟ್) ವ್ಯವಸ್ಥೆಯನ್ನು ಬಲಪಡಿಸಬೇಕು. ಬೀಟ್‌ಗೆ ನಿಯೋಜನೆಗೊಂಡ ಕಾನ್‌ಸ್ಟೆಬಲ್ ಮೂಲಕ ಎಲ್ಲ ಸೇವೆಗಳನ್ನು ಜನರಿಗೆ ಒದಗಿಸಬೇಕು. ಈ ಮೂಲಕ ಜನರ ವಿಶ್ವಾಸ ಗಳಿಸಿ, ಇಲಾಖೆಯ ಘನತೆಯನ್ನು ಹೆಚ್ಚಿಸಬೇಕು ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಜಿಲ್ಲೆಯ ಪೊಲೀಸರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿ ಬೀಟ್ ಸಿಬ್ಬಂದಿ ಕಡ್ಡಾಯವಾಗಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.

ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ನಿಗದಿತ ಸಮಯಕ್ಕೆ ತ್ವರಿತವಾಗಿ ಇತ್ಯರ್ಥಪಡಿಸಬೇಕು. ನಿಗದಿತ ಸಮಯಕ್ಕೆ ತನಿಖೆ ಮುಕ್ತಾಯಗೊಳಿಸದೇ ಬಾಕಿ ಇರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣಗಳನ್ನು ಹೆಚ್ಚು ಬಾಕಿ ಉಳಿಸಿಕೊಂಡರೆ, ಅಂಥ ಪೊಲೀಸರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪೊಲೀಸರು ದಿನದ 24 ಗಂಟೆ ಕೆಲಸ ಮಾಡುತ್ತಾರೆಂದು ಜನರು ತಿಳಿದುಕೊಂಡಿದ್ದಾರೆ. ಆದರೆ, ನಮ್ಮಲ್ಲಿ ಹಲವರು ಸಮರ್ಪಕವಾಗಿ ಕೆಲಸ ಮಾಡದಿರುವ ಬಗ್ಗೆ ದೂರುಗಳಿವೆ. ಯಾರೇ ಪೊಲೀಸರಿದ್ದರೂ ಸಮಯಕ್ಕೆ ಸರಿಯಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಸೈಬರ್ ಕ್ರೈಂ ಪ್ರಕರಣ ಹೆಚ್ಚದಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಆಗಾಗ ರೌಡಿ ಪರೇಡ್ ಮಾಡಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net