ಪೊಲೀಸರು ದೈಹಿಕ ಸದೃಢತೆ ಕಡೆಗೆ ಗಮನ ಹರಿಸಲಿ; ಖಾಕಿ ಪಡೆಯ ಧೈರ್ಯ, ಕರ್ತವ್ಯ ಪ್ರಜ್ಞೆ ಸ್ಮರಣೀಯ * ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅಕ್ಷಯ ಶ್ರೀಧರ ಸಲಹೆ

21 HVR 11
Published on

ಹಾವೇರಿ: ಪೊಲೀಸರಿಗೆ ದೈಹಿಕ ಆರೋಗ್ಯ ಅತಿ ಅವಶ್ಯವಾಗಿದ್ದು, ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಪ್ರತಿಶತ 100ರಷ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಆದಷ್ಟು ತಮ್ಮ ದೈಹಿಕ ಸಾಮರ್ಥ್ಯದ ಕಡೆಗೆ ಗಮನ ಹರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ ಸಲಹೆ ನೀಡಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಪೊಲೀಸ್ ಹುತಾತ್ಮ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಸಿಲು, ಮಳೆ, ಚಳಿ, ಗಾಳಿ, ಹಗಲು-ರಾತ್ರಿ ಯಾವುದನ್ನು ಪರಿಗಣಿಸದೆ ಹಬ್ಬ- ಹರಿದಿನ, ಜಾತ್ರೆ, ಪ್ರತಿಭಟನೆ, ಸಾವು ನೋವು, ಅಹಿತಕರ ಘಟನೆಗಳು ಸಂಭವಿಸಿದಾಗಲೂ ಪೊಲೀಸರು ಧೈರ್ಯದಿಂದ ಸೇವೆ ಸಲ್ಲಿಸುತ್ತಾರೆ. ಅವರ ಕರ್ತವ್ಯ ಪ್ರಜ್ಞೆ ಸ್ಮರಣೀಯ ಎಂದರು.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ನಿರಂತರವಾಗಿ ಸಾರ್ವಜನಿಕರಿಗಾಗಿಯೇ ದುಡಿಯುತ್ತಿರುತ್ತಾರೆ. ಅವರ ಕುಟುಂಬಗಳ ಕಡೆಗೂ ಗಮನ ಕೊಡುವುದು ಅತಿ ಅವಶ್ಯಕವಾಗಿದೆ. ತಮ್ಮ ಕುಟುಂಬಗಳ ರಕ್ಷಣೆಗೆ ಆರೋಗ್ಯ, ಜೀವ ವಿಮೆಯಂಥ ಸೌಲಭ್ಯಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾತನಾಡಿ, ಪ್ರತಿ ವರ್ಷ ಆಚರಿಸುವಂತೆ ಈ ವರ್ಷವು ಜಿಲ್ಲೆಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟವರ ಸ್ಮರಣಾರ್ಥಕವಾಗಿ ಇಡಿ ದೇಶಾದ್ಯಂತ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ದಿನಾಂಕ 01-09-2023ರಿಂದ 31-08-2024ರವರೆಗೆ ರಾಜ್ಯದಲ್ಲಿ ಐವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮರಣ ಹೊಂದಿದ್ದಾರೆ. ದೇಶದಲ್ಲಿ 216 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಈ ವರ್ಷ ಮೃತಪಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ, ಜಿಲ್ಲೆಯ ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು. ಕಾನ್‌ಸ್ಟೇಬಲ್ ಸಂತೋಷ ಸುಧಾಕರ ಜವಳಿ ನಿರೂಪಿಸಿದರು.
ಗಾಳಿಯಲ್ಲಿ ಗುಂಡು, ಮೌನಾಚರಣೆ
ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು ಹಾಗೂ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net