ಕಾನೂನು ಕಾಪಾಡುವುದೇ ಪೊಲೀಸರ ಧರ್ಮ; ಸಂವಿಧಾನವೇ ಮಹಾನ್ ಗ್ರಂಥ; ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪಿಎಸ್‌ಐ ಆರ್.ವೈ ಅಂಬಿಗೇರ ಹೇಳಿಕೆ

2 HVR 4
Published on

ಹಾವೇರಿ: ಪೊಲೀಸರು ಶಿಸ್ತು ಮತ್ತು ಸಂಯಮದಿಂದ ಕರ್ತವ್ಯ ನಿರ್ವಹಿಸಬೇಕು. ಪೊಲೀಸರಿಗೆ ಧರ್ಮವೆಂದರೆ ಕಾನೂನು ಕಾಪಾಡುವುದಾಗಿದೆ. ಪೊಲೀಸರಿಗೆ ಸಂವಿಧಾನವೇ ಮಹಾಗ್ರಂಥವಾಗಿದೆ. ಇವೆರಡರ ಅಡಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಆರ್.ವೈ ಅಂಬಿಗೇರ ಹೇಳಿದರು.

ನಗರದ ಕೆರಿಮತ್ತಿಹಳ್ಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೊಲೀಸ್ ಕರ್ತವ್ಯ ನಿರ್ವಹಿಸುವಾಗ ಪೊಲೀಸ್ ಬಾವುಟ ಅವರ ಬಳಿ ಇರುತ್ತದೆ. ಅವರ ಕರ್ತವ್ಯ ಪ್ರಜ್ಞೆಯಿಂದ ಆ ಬಾವುಟವು ಎತ್ತರೆತರಕ್ಕೆ ಹೋಗುತ್ತದೆ. ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿದರೆ ಇಲಾಖೆಯ ಘನತೆ ಗೌರವ ಹಾಳಾಗುತ್ತದೆ. ಹಾಗಾಗಿ, ಪೊಲೀಸರು ಸಮಾಜದ ಬಗ್ಗೆ ಕಳಕಳಿ ಭಾವನೆ ಹೊಂದಬೇಕು. ಸಾರ್ವಜನಿಕರ ನೆಮ್ಮದಿಗಾಗಿ ದುಡಿಯಬೇಕು ಎಂದರು.

ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ವರದಿ ವಾಚನ ಮಾಡಿದರು. ಕರ್ನಾಟಕ ಪೊಲೀಸ್ ಪಡೆಯನ್ನು 1965ರ ಏ.2ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿ ಇಡಲಾಗುತ್ತದೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿ.ಬಿ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 150 ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದಾರೆ. ಎಲ್ಲರೂ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಎಲ್ಲ ನಿವೃತ್ತ ಪೊಲೀಸರು ಸಂಘದ ಸದಸ್ಯರಾಗಿ ಎಂದು ಹೇಳಿದರು.

ಪರೇಡ್ ಕಮಾಂಡರ್ ಆರ್‌ಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಪಡೆಗಳ ಪಥ ಸಂಚಲನ ನಡೆಯಿತು. ಆರ್‌ಪಿಐ ಅಶೋಕ ಹೊಸಮನಿ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ಪಥ ಸಂಚಲನ ನಡೆಸಿತು.

ಬ್ಯಾಡಗಿ ಸಿಪಿಐ ಮಾಲತೇಶ ಲಂಬಿ ವಂದಿಸಿದರು ಹಾಗೂ ಸಂತೋಷ ಜವಳಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವಿಭಾಗದ ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಅಧಿಕಾರಿ, ಸಿಬ್ಬಂದಿ, ಗಣ್ಯರು ಭಾಗವಹಿಸಿದ್ದರು.

15.78 ಲಕ್ಷ ರೂ. ಸಂಗ್ರಹ

ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು. ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ವೈದ್ಯಕೀಯ ವೆಚ್ಚ ಹಾಗೂ ಶವ ಸಂಸ್ಕಾರಕ್ಕಾಗಿ ಧನಸಹಾಯ ನೀಡಲಾಗುತ್ತದೆ. ಸಂಗ್ರಹವಾದ ಹಣದಲ್ಲಿ ಅರ್ಧದಷ್ಟು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ಉಳಿದ ಅರ್ಧ ಹಣ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಉಪಯೋಗಿಸಲಾಗುತ್ತದೆ. ಮಾರ್ಚ್ 31, 2025ರ ಅಂತ್ಯಕ್ಕೆ ಪೊಲೀಸ್ ಧ್ವಜ ಮಾರಾಟ ಮಾಡಿ 15 ಲಕ್ಷ ರೂ. 78 ಸಾವಿರ ರೂ. ಬಂದಿದೆ. ಇದರಲ್ಲಿ 40 ಸಾವಿರ ರೂ. ಮರಣೋತ್ತರ ಪರಿಹಾರವಾಗಿ ನೀಡಲಾಗಿದೆ. ವೈದ್ಯಕೀಯ ವೆಚ್ಚ ಮರುಪಾವತಿಗಾಗಿ 8.59 ಲಕ್ಷ ರೂ. ನೀಡಲಾಗಿದೆ ಎಂದು ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ವಿವರಿಸಿದರು.

ಕೋಟ್:

ಜಿಲ್ಲೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದಲ್ಲಿ ಹಣ ಇರುತ್ತದೆ. ಹಲವರಿಗೆ ಇದು ಗೊತ್ತಿರುವುದಿಲ್ಲ. ಯಾರಾದರೂ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ಸಹಾಯ ಕೋರಿ ಬಂದರೆ ಸಹಾಯ ಮಾಡಿ. ಕರುಣೆ ತೋರಬೇಡಿ. ನಿರ್ಲಕ್ಷ್ಯ ತೋರಬೇಡಿ. ನಾವೂ ಮುಂದೆ ಅದೇ ಸ್ಥಾನದಲ್ಲಿ ಬರುತ್ತೇವೆ ಎಂಬುದನ್ನು ಯಾರೂ ಮರೆಯಬಾರದು.

- ವಿಜಯಕುಮಾರ ಸಂತೋಷ, ಪ್ರಭಾರ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net