

ಹಾವೇರಿ: ಬಾಡಿ ಮಾಸ್ ಇಡೆಕ್ಸ್ (ಬಿಎಂಐ) ಪ್ರಕಾರ ಹೆಚ್ಚು ತೂಕ ಹೊಂದಿರುವ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಒಂದು ತಿಂಗಳ ಕಾಲ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಶಿಬಿರದ ಮೂಲಕ ಪೊಲೀಸರು ದೇಹದಂಡನೆ ಮೂಲಕ ತೂಕ ಇಳಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಂಶುಕುಮಾರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ ಅವರ ಆದೇಶದ ಮೇರೆಗೆ ಬಿಎಂಐ ಇಂಡೆಕ್ಸ್ ಪ್ರಕಾರ ಎಲ್ಲ ಠಾಣೆಗಳಲ್ಲಿ ತಪಾಸಣೆ ನಡಸಿ, ಶೇ.28ಕ್ಕಿಂತ ಹೆಚ್ಚು ತೂಕ ಹೊಂದಿದ ಜಿಲ್ಲೆಯ 65 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕಾರ್ಯಾಗಾರಕ್ಕೆ ಆಯ್ಕೆ ಮಾಡಲಾಗಿತ್ತು. ಮೇ 22ರಿಂದ ಜೂನ್ 21ರವರೆಗೆ ಹಾಗೂ ಜು.9ರಿಂದ ಜು.16ರವರೆಗೆ ಎರಡು ಹಂತದಲ್ಲಿ ಕಾರ್ಯಾಗಾರ ನಡೆಸಲಾಯಿತು.
ಕಾರ್ಯಾಗಾರದಲ್ಲಿ ಹೆಚ್ಚಿನ ತೂಕ ಹೊಂದಿರುವ ಡಿವೈಎಸ್‌ಪಿ, ಪಿಐ, ಪಿಎಸ್‌ಐ, ಕಾನ್‌ಸ್ಟೆಬಲ್ ಸೇರಿ 65 ಸಿಬ್ಬಂದಿಗೆ ಹಂತ ಹಂತವಾಗಿ ದೈಹಿಕ ಮತ್ತು ಮಾನಸಿಕ ತರಬೇತಿ ನೀಡಲಾಯಿತು. ತಿಂಗಳ ಕಾಲ ಯೋಗ, ವ್ಯಾಯಾಮ, ಪ್ರಾಣಾಯಾಮ, ಏರೋಬಿಕ್ಸ್, ನವಚೇತನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ, ಜಿಲ್ಲಾ ಪೊಲೀಸ್ ಸಮಾಲೋಚಕಿ ಗಾಯತ್ರಿ ಹೆಗಡೆ ಹಾಗೂ ಡೈಮಂಡ್ ಫಿಟ್ ಮಾರ್ಷಲ್ ಆರ್ಟ್ಸ್ ಶಿಕ್ಷಕ ಸುನೀಲ ಡೊಳ್ಳಿನ ನೇತೃತ್ವದಲ್ಲಿ ಶಿಬಿರ ಯಶಸ್ವಿಗೊಂಡಿದೆ. ತಿಂಗಳ ಅವಧಿಯಲ್ಲಿ ಹಲವರ ತೂಕ ಇಳಿಕೆಯಾಗಿದ್ದು, ತೂಕ ಹೆಚ್ಚಿದ್ದವರಿಗೆ ಮತ್ತೆ ಶಿಬಿರ ನಡೆಸಲು ಇಲಾಖೆ ಚಿಂತನೆ ನಡೆಸಿದೆ ಎನ್ನುತ್ತಾರೆ ಸಮಾಲೋಚಕಿ ಗಾಯತ್ರಿ ಹೆಗಡೆ.
ಫಿಟ್ನೆಸ್ ಮಂತ್ರ
ಕಾನೂನು ಸುವ್ಯವಸ್ಥೆ ಕಾಪಾಡುವ ಸಿವಿಲ್ ಪೊಲೀಸರಿಗೆ ಕೆಲಸದ ಒತ್ತಡದಿಂದಾಗಿ ಸ್ಥೂಲಕಾಯ ಅಥವಾ ಕಡಿಮೆ ತೂಕ ಹೊಂದುವುದು ಹೆಚ್ಚಾಗುತ್ತಿದೆ. ಇಂಥವರಿಗೆ ಬಿಎಂಐ ಕಾರ್ಯಾಗಾರದ ಮೂಲಕ ಫಿಟ್ನೆಸ್ ಮಂತ್ರ ಹೇಳಿಕೊಡಲಾಗುತ್ತಿದೆ. ಆರೋಗ್ಯಕರ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಮಾಹಿತಿ ನೀಡಲಾಗುತ್ತಿದೆ. ಇದರಿಂದ ಅವರ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.