ಲೈಂಗಿಕ ದೌರ್ಜನ್ಯ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ; ಅರ್ಬಾಜ್ ದಸ್ತಗೀರ ಶಿಕ್ಷೆಗೀಡಾದ ಯುವಕ

Published on

ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2.80 ಲಕ್ಷ ರೂ. ದಂಡ ವಿಧಿಸಿ ಹಾವೇರಿಯ ವಿಶೇಷ ಸತ್ರ ನ್ಯಾಯಾಲಯದ (ಶೀಘ್ರಗತಿ ನ್ಯಾಯಾಲಯ-1) ಮಹತ್ವದ ತೀರ್ಪು ಪ್ರಕಟಿಸಿದೆ.
ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ 20 ವರ್ಷದ ಅರ್ಬಾಜ್ ದಸ್ತಗೀರ ಶಿಕ್ಷೆಗೀಡಾದ ಅಪರಾಧಿ.
ಅರ್ಬಾಜ್ ಅಪ್ರಾಪ್ತ ಬಾಲಕಿ ಮೊಬೈಲ್‌ಗೆ ಸಂದೇಶ ಕಳುಹಿಸಿ ಹೊರಗೆ ಕರೆಸಿದ್ದ. ಬಳಿಕಾಕೆಯನ್ನು ಅಪಹರಣ ಮಾಡಿಕೊಂಡು ರಾಣೇಬೆನ್ನೂರಿನ ಲಾಡ್ಜ್‌ವೊಂದಕ್ಕೆ ಕರೆದುಕೊಂಡು ಹೋಗಿದ್ದ. ‘ನಿನ್ನನ್ನು ಪ್ರೀತಿಸುತ್ತೇನೆ ಹಾಗೂ ಮದುವೆಯಾಗುತ್ತೇನೆ’ ಎಂದು ಹೇಳಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಸೂಲಿಬೆಲೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿಯೂ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ರಾಣೇಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಣೇಬೆನ್ನೂರ ಶಹರ ವೃತ್ತದ ತನಿಖಾಧಿಕಾರಿ ಸಿಪಿಐ ಎಂ.ಐ. ಗೌಡಪ್ಪಗೌಡ್ರ ತನಿಖೆ ನಡೆಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ನಿಂಗೌಡ ಪಾಟೀಲ ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಈ ದಂಡದ ಹಣದಲ್ಲಿ ನೊಂದ ಬಾಲಕಿಗೆ 2,50,000 ರೂ. ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ 4,00,000 ರೂ. ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net