ಅಪ್ರಾಪ್ತ ಬಾಲಕಿ ಮೇಲೆ ಸರಣಿ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು

Published on

ಹಾವೇರಿ: ಪ್ರೀತಿಯ ನೆಪದಲ್ಲಿ ಹದಿನೈದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪ್ರತ್ಯೇಕವಾಗಿ ಸರಣಿ ಅತ್ಯಾಚಾರ ನಡೆಸಿ, ಆಕೆ ಗರ್ಭಿಣಿಯಾಗಲು ಕಾರಣರಾಗಿದ್ದ ಮೂವರ ವಿರುದ್ಧ ಬಂಕಾಫುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಶಿಗ್ಗಾಂವಿ ತಾಲೂಕಿನ ಗ್ರಾಮವೊಂದರ ನಿವಾಸಿಗಳಾದ ಗೋಣಿರುದ್ರ ಶಿವಪ್ಪ ಶಿಗ್ಗಟ್ಟಿ (24), ಹೇಮಂತ ಅಲಿಯಾಸ್ ಅಣ್ಣಪ್ಪ ಕಬನೂರ (23) ಹಾಗೂ ಮಂಜುನಾಥ ಶಿವಕುಮಾರ ಶಿಗ್ಗಟ್ಟಿ (23) ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿತರು.

ಇಟ್ಟಿಗೆ ಕೆಲಸ ಮಾಡುತ್ತಿದ್ದ ಗೋಣಿರುದ್ರ ಬಾಲಕಿಗೆ ಪ್ರೀತಿಸುತ್ತೇನೆ ಎಂದು ನಂಬಿಸಿ ಡಿಸೆಂಬರ್ 22, 2024ರಂದು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರವೂ ನಾಲ್ಕೈದು ಬಾರಿ ಕೃತ್ಯ ಎಸಗಿದ್ದ. ಈ ವಿಚಾರವನ್ನು ಸ್ನೇಹತರಾದ ಹೇಮಂತ ಹಾಗೂ ಮಂಜುನಾಥ ಮುಂದೆ ಹೇಳಿಕೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಹೇಮಂತ ಹಾಗೂ ಮಂಜುನಾಥ ಅಪ್ರಾಪ್ತೆಗೆ ಬ್ಲಾೃಕ್‌ಮೇಲ್ ಮಾಡಿ, ಪ್ರತ್ಯೇಕವಾಗಿ ಸರಣಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ವರದಿಯಾಗಿದೆ.

ಬಾಲಕಿಯ ದೊಡ್ಡಪ್ಪನ ಮಗ, ಆಕೆಯ ಸಹೋದರ ಹೇಮಂತ ಕೂಡ ಅತ್ಯಾಚಾರ ಎಸಗಿರುವುದು ಗೊತ್ತಾಗಿದೆ. ಹೇಮಂತ ಕಬನೂರ ನಾಪತ್ತೆಯಾಗಿದ್ದು, ಉಳಿದಂತೆ ಗೋಣಿರುದ್ರ, ಮಂಜುನಾಥ, ಹನುಮಂತಪ್ಪ ಹಾಗೂ ಮಾರುತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಸ್ ಮುಚ್ಚಿ ಹಾಕುವ ಯತ್ನ

ಬಾಲಕಿ ಗರ್ಭಿಣಿಯಾದ ಬಳಿಕ ಪಾಲಕರಿಗೆ ವಿಷಯ ಗೊತ್ತಾಗಿದೆ. ನಂತರ ಗ್ರಾಮದ ಲಕ್ಷ್ಮಣ ಹನುಮಂತಪ್ಪ ಕಬನೂರ ಹಾಗೂ ಮಾರುತಿ ಶಿವಪ್ಪ ಶಿಗ್ಗಟ್ಟಿ ಎಂಬುವರು ಬಾಲಕಿಯ ತಂದೆಯೊಂದಿಗೆ ರಾಜಿ ಪಂಚಾಯಿತಿ, ಬಲವಂತವಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ಬಾಲಕಿಯ ತಾಯಿ ಈ ಇಬ್ಬರ ವಿರುದ್ಧವೂ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net