ಹಾವೇರಿ: ಸಮಗ್ರ ಕೃಷಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೊದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ (ಪಿಎಂಡಿಡಿಕೆವೈ) ಯನ್ನು ರೂಪಿಸಿದ್ದು ರಾಷ್ಟ್ರದ 100 ಜಿಲ್ಲೆಯಲ್ಲಿ ಅ.11ರಂದು ಅನುಷ್ಠಾನ ಆಗುತ್ತಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳನ್ನೂ ಆಯ್ಕೆ ಮಾಡಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚೌಹಾಣ ಅವರಿಗೆ ಸಂಸದ ಬಸವರಾಜ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಯೋಜನೆ ಅಡಿಯಲ್ಲಿ ಕೃಷಿ ಉತ್ಪನ್ನ ಹೆಚ್ಚಿಸುವುದು ಕೃಷಿಯಲ್ಲಿ ವಿವಿಧ ದವಸ ಧಾನ್ಯಗಳನ್ನು ಬೆಳೆಯುವುದು ಮತ್ತು ಸಮಗ್ರ ಕೃಷಿ ಅಭಿವೃದ್ಧಿ, ಜಿಲ್ಲೆಯಲ್ಲಿ ನಿರಾವರಿ ಸೌಲಭ್ಯ, ರೈತರಿಗೆ ಅಲ್ಪಾವಧಿ ದೀರ್ಘಾವದಿ ಹಣಕಾಸು ನೆರವು ಮತ್ತು ಸುಗ್ಗಿಯ ನಂತರ ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ದವಸ, ಧಾನ್ಯಗಳ ದಾಸ್ತಾನು ಕೇಂದ್ರ ನಿರ್ಮಾಣ ಮಾಡುವುದು. ಕೇಂದ್ರ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳನ್ನು ಸಂಯೋಜಿಸಿ ಸಮಗ್ರವಾಗಿ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದು ಹಾಗೂ ಸಮಗ್ರ ಕೃಷಿ ಅಭಿವೃದ್ಧಿಗೆ ದೊಡ್ಡ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಹನುಮನಮಟ್ಟಿಯಲ್ಲಿ ಸಮಾರಂಭ
ಅ.11ರಂದು ಧನ ಧಾನ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚ್ಯುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉದ್ಘಾಟಿಸಲಾಗುವುದು. ರೈತರು, ಆಸಕ್ತರು ಪಾಲ್ಗೊಳ್ಳಬೇಕೆಂದು ಬೊಮ್ಮಾಯಿ ವಿನಂತಿಸಿಕೊಂಡಿದ್ದಾರೆ.