ಛಾಯಾಗ್ರಾಹಕರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ; ಮೊಬೈಲ್ ಬಂದ ಬಳಿಕ ವೃತ್ತಿಗೆ ಪೆಟ್ಟು; ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ

13 HVR 5 B
Published on

ಹಾವೇರಿ: ಮೊಬೈಲ್ ಬಂದ ಬಳಿಕ ಫೋಟೋಗ್ರಫಿ ವೃತ್ತಿ ಕಡಿಮೆಯಾಗಿದೆ. ತಂತ್ರಜ್ಞಾನ ಬಂದ ಬಳಿಕ ಜಗತ್ತು ಬದಲಾವಣೆಯಾಗುತ್ತಿದೆ. ಪೋಟೋಗ್ರಾಫರ್‌ಗಳು ಸಹಿತ ನವನವೀನ ತಂತ್ರಜ್ಞಾನಕ್ಕೆ ಹೊಂದಿಕೊಂಡು ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ ಸಲಹೆ ನೀಡಿದರು.

ಇಲ್ಲಿನ ದಾನೇಶ್ವರಿ ನಗರದ ಬಂಟರ ಭವನದಲ್ಲಿ ಶನಿವಾರ ಹಾವೇರಿ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 23ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾರು ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಪೋಟೋ ತೆಗೆಸಿಕೊಳ್ಳುವಾಗ ಛಾಯಾಗ್ರಹಕರ ಮಾತುಗಳನ್ನು ಕೇಳಬೇಕಾಗುತ್ತದೆ. ಯಾವುದೋ ಒಂದು ಚಿತ್ರದ ಸನ್ನಿವೇಶವನ್ನು ಬಹಳ ವರ್ಷಗಳ ಕಾಲ ನೆನಪು ಇಟ್ಟುಕೊಳ್ಳುವಂತಹ ಕೆಲಸವನ್ನು ವೃತ್ತಿನಿರತ ಛಾಯಾಗ್ರಾಹಕರು ಮಾಡುತ್ತಾರೆ. ಇದೊಂದು ಜವಾಬ್ದಾರಿಯುತ ಕೆಲಸವಾಗಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ವ್ಯಕ್ತಿಯ ಭಾವನೆ, ಕಾಲ, ಇತಿಹಾಸವನ್ನು ಅತ್ಯಂತ ಯಶಸ್ವಿಯಾಗಿ ದಾಖಲೀಕರಣ ಮಾಡುವುದು ಛಾಯಾಗ್ರಾಹಕ ವೃತ್ತಿಯಿಂದ ಮಾತ್ರ ಸಾಧ್ಯ. ಒಳಗಣ್ಣಿನಲ್ಲಿರುವ ಸೂಕ್ಷ್ಮತೆ ಅರಿತುಕೊಂಡು ಚಿತ್ರ ಸೆರೆ ಹಿಡಿಯುವ ಕಲೆ ಬೆಳೆಸಿಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಬಹುದು. ಬರುವ ದಿನಗಳಲ್ಲಿ ವೃತ್ತಿನಿರತ ಛಾಯಾಗ್ರಾಹಕರಿಗೆ ಬಹಳಷ್ಟು ಸವಾಲುಗಳು ಬರುತ್ತವೆ. ಯಾವುದೇ ಸಂದರ್ಭದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಬದ್ಧತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳೋಣ ಎಂದರು.

ಸಂಘದ ಹಾವೇರಿ ತಾಲೂಕಾಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ, ಬ್ಯಾಡಗಿ ತಾಲೂಕು ಅಧ್ಯಕ್ಷ ಶಿವಾನಂದ ಕಾಶಂಬಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ತಾಲೂಕು ಗೌರವಾಧ್ಯಕ್ಷ ಸಿದ್ದಲಿಂಗಪ್ಪ ಹಳ್ಳಿಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ಉಪಾಧ್ಯಕ್ಷ ಬಸವರಾಜ ಚಾವಡಿ, ರಟ್ಟಿಹಳ್ಳಿ ತಾಲೂಕಾಧ್ಯಕ್ಷ ಬಿ.ಎಂ ಪವಾರ, ಮತ್ತಿತರರು ಉಪಸ್ಥಿತರಿದ್ದರು.

ಮಾಲತೇಶ ಇಚ್ಚಂಗಿ ಸ್ವಾಗತಿಸಿದರು. ನಾಗೇಶ ಬಾರ್ಕಿ ನಿರೂಪಿಸಿದರು. ಶಿವಬಸವ ಬಣಕಾರ ಪ್ರಾರ್ಥಿಸಿದರು. ಅಶೋಕ ಬ್ಯಾಡಗಿ ವಂದಿಸಿದರು.

ಭವನ ನಿರ್ಮಾಣಕ್ಕೆ ಸಹಕಾರ

ಜಿಲ್ಲಾ ಕೇಂದ್ರದಲ್ಲಿ ಬಹಳ ವರ್ಷದಿಂದ ನನೆಗುದಿಗೆ ಬಿದ್ದಿರುವ ಛಾಯಾಗ್ರಹಕರ ಸಂಘ(ಭವನ)ದ ನಿವೇಶನ ಬೇಡಿಕೆ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ವಾರದೊಳಗೆ ನಿಗದಿತ ಶುಲ್ಕ ಪಾವತಿಸಿದರೆ ಪ್ರಾಧಿಕಾರದಿಂದ ಆದೇಶ ಪ್ರತಿ ಕೊಡುವುದಾಗಿ ಗಾಜಿಗೌಡ್ರ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net