

ಹಾವೇರಿ: ರಾಜ್ಯ ಸರ್ಕಾರ ಶಿಕ್ಷಣವನ್ನು ರಾಜಕೀಯ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳದೇ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಶೈಕ್ಷಣಿಕ ದೃಷ್ಟಿಯಿಂದ ಪರಾಮರ್ಶೆ ನಡೆಸಬೇಕು. ಎನ್‌ಇಪಿ ರದ್ದು ಮಾಡುವ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಪೀಪಲ್ಸ್ ಫಾರ್ ಕರ್ನಾಟಕ ಎಜುಕೇಶನ್ ಸಂಘಟನೆಯ ಸಂಚಾಲಕ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಸುಧೀಂದ್ರ ದೇಶಪಾಂಡೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಇಪಿಗೆ ಅಗತ್ಯವಿರುವ ಬದಲಾವಣೆಗಳನ್ನು ತರುವುದಕ್ಕೆ ಮುಕ್ತವಾಗಿದೆ. ದೇಶಕ್ಕೆ, ರಾಜ್ಯಕ್ಕೆ ಪೂರಕವಾದ ರೀತಿಯಲ್ಲಿ ಸೂಕ್ತ ಬಸಲಾವಣೆಗಳನ್ನು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚಿಸಿ ಅದಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದ ಎನ್‌ಇಪಿ ಮಾರ್ಗಸೂಚಿಯಂತೆ ಮುಂದುವರೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯ ಆರಂಭದಿಂದಲೂ ಬ್ರಿಟೀಷ್ ವಸಾಹತುಶಾಹಿ ಶಿಕ್ಷಣ ಪದ್ಧತಿ ಮುಂದುವರಿದ ಭಾಗವಾಗಿದೆ. ಭಾರತೀಯತೆಯ ಅಂಶವನ್ನು ಕಳೆದುಕೊಂಡು ಬ್ರಿಟಿಷ್ ಪಳೆಯುಳಿಕೆಯಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಈ ಎಲ್ಲ ಟೀಕೆಗಳಿಗೆ ಉತ್ತರವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆ. ನಾಲ್ಕೈದು ವರ್ಷಗಳಿಂದ ತಜ್ಞರಿಂದ ಅಧ್ಯಯನ ಮಾಡಿ, 2 ಲಕ್ಷ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಎನ್‌ಇಪಿ ಜಾರಿಗೊಳಿಸಲಾಗಿದೆ. ಎನ್‌ಇಪಿ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ನಮ್ಮದಾಗಿದೆ. ಇಂತಹ ಸಂದರ್ಭದಲ್ಲಿ ರದ್ದುಗೊಳಿಸಲು ಹೊರಟಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಗದಗ ಪಂಚಾಯತ ರಾಜ್ ಮತ್ತು ಗ್ರಾಮೀಣ ಅಭಿವೃದ್ದಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಎನ್. ಪಾಟೀಲ, ವೈದ್ಯ ಡಾ.ಶಿವಾನಂದ ಕೆಂಬಾವಿ, ಇತರರಿದ್ದರು.
ರಾಣೆಬೆನ್ನೂರಲ್ಲಿ ಶಿಕ್ಷಣ ತಜ್ಞರ ಸಭೆ ನಾಳೆ
ಏಕಾಏಕಿಯಾಗಿ ಎನ್‌ಇಪಿ ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಹಾಗೂ ಇದರ ಪರಿಣಾಮಗಳ ಬಗ್ಗೆ ಅವಲೋಕಿಸಲು ಸೆ.30ರಂದು ಸಂಜೆ 5.30ಕ್ಕೆ ರಾಣೆಬೆನ್ನೂರಿನ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಹಾಲಿ ಮತ್ತು ಮಾಜಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಪಾಲಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲ ಚಿಂತಕರ ಶಿಕ್ಷಣ ತಜ್ಞರ ಸಭೆಯನ್ನು ಆಯೋಜಿಸಲಾಗಿದೆ ಎಂದು ಸುಧೀಂದ್ರ ದೇಶಪಾಂಡೆ ತಿಳಿಸಿದರು.