ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಕಾನ್‌ಸ್ಟೆಬಲ್ ? ; ಹೊಸರಿತ್ತಿ ಬಳಿ ಡಾಬಾದಲ್ಲಿ ಕುಡಿದ ಮತ್ತಿನಲ್ಲಿ ಗಲಾಟೆ ಆರೋಪ

13 HVR 7 B
Published on

ಹಾವೇರಿ: ತಾಲೂಕಿನ ಹೊಸರಿತ್ತಿ ಬಳಿಯ ಡಾಬಾ ಒಂದರಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯೊಬ್ಬರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯಲ್ಲಪ್ಪ ಓಲೇಕಾರ ಹಲ್ಲೆಗೀಡಾದ ವ್ಯಕ್ತಿ. ನನ್ನ ಸ್ನೇಹಿತರೊಂದಿಗೆ ಭಾನುವಾರ ರಾತ್ರಿ ಡಾಬಾದಲ್ಲಿ ಊಟ ಮಾಡುತ್ತಿದ್ದೆ. ಈ ವೇಳೆ ಡಾಬಾಕ್ಕೆ ಬಂದ ಕಾನ್‌ಸ್ಟೆಬಲ್ ದೇವರಾಜ ತೋಟಗೇರ ನಿಧಾನವಾಗಿ ಮಾತನಾಡು ಎಂದು ಜಗಳ ತೆಗೆದರು. ಮದ್ಯ ಸೇವಿಸುತ್ತಿದ್ದ ಅವರು ಜೋರಾಗಿ ಮಾತನಾಡುತ್ತ ಬಿಯರ್ ಬಾಟಲಿಯಿಂದ ತಲೆಗೆ ರಕ್ತ ಬರುವಂತೆ ಜೋರಾಗಿ ಹೊಡೆದರು ಎಂದು ಯಲ್ಲಪ್ಪ ಆರೋಪಿಸಿದ್ದಾರೆ. ತಲೆಗೆ ಏಟು ಬಿದ್ದು ರಕ್ತಸ್ರಾವಗೊಂಡಿದ್ದ ಯಲ್ಲಪ್ಪ ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ದೂರು ದಾಖಲಿಸಿದರೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಎಸ್‌ಪಿ ಅಂಶುಕುಮಾರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಲಾಕಪ್ ಡೆತ್ ಅನ್ನೇ ದಕ್ಕಿಸಿಕೊಂಡಿದ್ದೇನೆ...

2023ರಲ್ಲಿ ಹೊಸರಿತ್ತಿಯಲ್ಲಿ ನಡೆದಿದೆ ಎನ್ನಲಾಗಿದ್ದ ಲಾಕಪ್ ಡೆತ್ ಪ್ರಕರಣದ ಕುರಿತು ಕಾನ್‌ಸ್ಟೆಬಲ್ ದೇವರಾಜ ಪ್ರಸ್ತಾಪಿಸಿದ್ದಾರೆ. ‘ಈ ಹಿಂದೆ ಲಾಕಪ್ ಡೆತ್ ಮಾಡಿದ್ದನ್ನೇ ದಕ್ಕಿಸಿಕೊಂಡೇವಿ ನಾವು, ಅವ ಯಾವ ಲೆಕ್ಕ ತಗೋ’ ಎಂದು ಹಲ್ಲೆ ನಡೆಸಿದ್ದಾರೆ ಎಂದು ಯಲ್ಲಪ್ಪ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net