ಜಾನುವಾರುಗಳಿಗೆ ಕಾಲ ಕಾಲಕ್ಕೆ ಚಿಕಿತ್ಸೆ ನೀಡಿ; ದನ, ಕರುಗಳ ಕಾಳಜಿ ವಹಿಸುವುದು ಪಶುಪಾಲನಾ ಇಲಾಖೆ ಕರ್ತವ್ಯ; ಎಸ್.ಜಿ.ಕೊರವರ

Published on

ಹಾವೇರಿ: ಜಾನುವಾರುಗಳು ರೈತನ ಆಸ್ತಿ. ದನ, ಕರುಗಳು ಉಳಿದರೆ ರೈತ ಬೆಳೆಯುತ್ತಾನೆ. ಹಾಗಾಗಿ, ಅವುಗಳಿಗೆ ಕಾಲ ಕಾಲಕ್ಕೆ ಸರಿಯಾದ ಚಿಕಿತ್ಸೆ ನೀಡುವುದು ಪಶುಪಾಲನಾ ಇಲಾಖೆಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜಿ.ಕೊರವರ ಹೇಳಿದರು.
ತಾಲೂಕಿನ ದೇವಿಹೊಸೂರ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್. ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಮಗ್ರ ಜಾನುವಾರು ನಿರ್ವಹಣೆ ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಪಶು ಸಖಿ) ಮೊದಲನೇ ಹಂತದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಗ್ಗಾಂವಿ ಮತ್ತು ಹಾವೇರಿ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ ಒಬ್ಬರಂತೆ ಪಶುಸಖಿಯರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ ಪಶುಸಖಿಯರಿಗೆ ಮೂಕ ಪ್ರಾಣಿಗಳ ಸೇವೆ ಮಾಡುವ ಅವಕಾಶ ಒದಗಿ ಬಂದಿರುತ್ತದೆ. ಪಶುಪಾಲನಾ ಇಲಾಖೆ ಹಾಗೂ ರೈತರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ಹೈನುಗಾರಿಕೆಯು ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚು ಲಾಭದಾಯಕವಾಗಿದೆ. ಪಶುಸಖಿಯರು ವೈಜ್ಞಾನಿಕ ಮತ್ತು ಲಾಭದಾಯಕವಾಗಿ ಪಶುಸಂಗೋಪನಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಾನುವಾರುಗಳ ಪಾಲನೆ- ಪೋಷಣೆಯ ಬಗ್ಗೆ, ಜಾನುವಾರುಗಳಲ್ಲಿ ಕಂಡು ಬರುವ ರೋಗಗಳ ಬಗ್ಗೆ ಮತ್ತು ಇನ್ನೂ ಹಲವಾರು ವಿಷಯಗಳ ಬಗ್ಗೆ ನುರಿತ ಪಶುವೈದ್ಯರಿಂದ ಭೋದನಾ ತರಬೇತಿಯನ್ನು ನೀಡಲಾಗುವುದು. ಈ ತರಬೇತಿಯ ಸದುಪಯೋಗವನ್ನು ಎಲ್ಲ ಪಶು ಸಖಿಯರು ಪಡೆದುಕೊಳ್ಳಬೇಕು ಎಂದರು.
ಜಿ.ಪಂ. ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪರಮೇಶ ಎನ್. ಹುಬ್ಬಳ್ಳಿ ಸ್ವಾಗತಿಸಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಕಿರಣಕುಮಾರ ಕೊಪ್ಪದ ನಿರೂಪಿಸಿದರು. ಬ್ಯಾಡಗಿ ಪಶು ಆಸ್ಪತೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ನರೇಂದ್ರನಾಥ ಚೌಡಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net