

ಹಾವೇರಿ: ಹಾಲು ಉತ್ಪನ್ನಗಳ ತಯಾರಿಕೆಯಲ್ಲಿ ದೇಶದಲ್ಲಿ ರಾಜ್ಯದ ನಂದಿನಿ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಷಯ. ವೈಜ್ಞಾನಿಕವಾಗಿ ಕೃತಕ ಗರ್ಭಧಾರಣಾ ಕಾರ್ಯ ಕೈಗೊಳ್ಳುವ ಮೂಲಕ ಉತ್ತಮ ತಳಿಯ ಕರುಗಳು ಜನಿಸುವುದರಿಂದ ಹಾಲು ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಸುಸ್ಥಿರ ಆದಾಯಕ್ಕೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ ಹೇಳಿದರು.
ದೇವಗಿರಿ ಬ್ಯಾಂಕ್ ಆಫ್ ಬರೋಡಾ ಸ್ವಉದ್ಯೋಗ ತರಬೇತಿ ಕೇಂದ್ರದಲ್ಲಿ ಬೆಂಗಳೂರು ಕರ್ನಾಟಕ ಜಾನುವಾರು ಅಭಿವೃದ್ದಿ ಸಂಸ್ಥೆ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ‘ರಾಷ್ಟ್ರೀಯ ಗೋಕುಲ ಮಿಷನ್’ ಯೋಜನೆಯಡಿ ಇತ್ತೀಚೆಗೆ ಆಯೋಜಿಸಿದ್ದ ಮೈತ್ರಿ ಕಾರ್ಯಕರ್ತರ ಒಂದು ತಿಂಗಳ ಭೋಧನಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷಿ ಚಟುವಟಿಕೆಯ ಜತೆಗೆ ಹೈನುಗಾರಿಕೆ ಮಾಡುವುದರಿಂದ ಆದಾಯವು ದ್ವಿಗುಣಗೊಂಡು ರೈತರಲ್ಲಿ ಆತ್ಮ ಸ್ಥೈರ್ಯ ತುಂಬುತ್ತದೆ. ಪಶುಪಾಲನಾ ಇಲಾಖೆಯ ವತಿಯಿಂದ ರೈತರ ಮನೆ ಬಾಗಿಲಿಗೆ ಕೃತಕ ಗರ್ಭಧಾರಣೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮೈತ್ರಿ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾತನಾಡಿ, ವೈಜ್ಞಾನಿಕ ಕೃತಕ ಗರ್ಭಧಾರಣಾ ತಂತ್ರವನ್ನು ಪ್ರಾಯೋಗಿಕವಾಗಿ ಎರಡು ತಿಂಗಳುಗಳ ಕಾಲ ತಜ್ಞವೈದ್ಯರಿಂದ ನಿಷ್ಠೆಯಿಂದ ಕಲಿತು ಗ್ರಾಮೀಣ ರೈತರಿಗೆ ಉಪಯೋಗವಾಗುವಂತೆ ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲ ಮೈತ್ರಿ ಕಾರ್ಯಕರ್ತರಿಗೆ ಹೇಳಿದರು.
ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರು ಮೈತ್ರಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಲು ಆಸಕ್ತರಿದ್ದಲ್ಲಿ ತಮ್ಮ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಜು.31ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ರಫೀಕ್ ಹಾಗೂ ಇತರ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಆರ್.ಎಸ್.ಇ.ಟಿ.ಐ.ಸಂಸ್ಥೆಯ ಮಂಜುಳಾ ಕೆ. ಸ್ವಾಗತಿಸಿದರು. ಡಾ.ಕಿರಣಕುಮಾರ ಕೆ.ಕೊಪ್ಪದ ನಿರೂಪಿಸಿದರು. ಡಾ.ಪವನ ಬೆಳಕೇರಿ ವಂದಿಸಿದರು.