

ಹಾವೇರಿ: ರಾಜ್ಯಾದ್ಯಂತ ಆರನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಏಕ ಕಾಲದಲ್ಲಿ ಅ.21ರಿಂದ ನ.20ರವರೆಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ರೈತರು ಇಲಾಖೆಯ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮನವಿ ಮಾಡಿದರು.
ನಗರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಾಲಿಕ್ಲಿನಿಕ್ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಆರನೇ ಸುತ್ತಿನ ಕಾಲುಬಾಯಿ ಬೇನೆ ತಡೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕಾ ಅಭಿಯಾನದಲ್ಲಿ ಲಾಖೆಯ ಸಿಬ್ಬಂದಿ ರೈತರ ಮನೆ ಮನೆಗೆ ತೆರಳಿ 3 ತಿಂಗಳ ಮೇಲ್ಪಟ್ಟ ಎಲ್ಲ ದನ ಹಾಗೂ ಎಮ್ಮೆಗಳಿಗೆ ಲಸಿಕೆ ಹಾಕುತ್ತಾರೆ ಎಂದರು.
ಜಿಲ್ಲೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ರೈತರ ಮನೆಗೆ ಹೋಗಿ ಲಸಿಕಾ ಕಾರ್ಯದಲ್ಲಿ ತೊಡಗುವುದರಿಂದ ಮುಂಜಾನೆ ಕೆಲ ಹೊತ್ತು ಪಶುವೈದ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು. ಕಾರಣ ಎಲ್ಲ ರೈತರು ಸಹಕರಿಸಬೇಕು ಎಂದರು.
ಪಾಲಿಕ್ಲಿನಿಕ್ ಆಸ್ಪತ್ರೆಯ ಉಪನಿರ್ದೇಶಕ ಡಾ.ಜಯಕುಮಾರ ಕಂಕನವಾಡಿ ಮಾತನಾಡಿ, ಜಿಲ್ಲೆಯಲ್ಲಿ ಲಸಿಕಾ ಸಂದರ್ಭದಲ್ಲಿ ಲಭ್ಯವಿರುವ ಎಲ್ಲ ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಕಡ್ಡಾಯ ಲಸಿಕೆ ಹಾಕಬೇಕು. ಅಲ್ಲದೇ ಲಸಿಕೆಯನ್ನು ಎಲ್ಲ ಹಂತದಲ್ಲಿಯೂ ಶೀತಲ ಸರಪಳಿಯಲ್ಲಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಲಸಿಕಾ ಕಾರ್ಯವನ್ನು ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಪಶುವೈದ್ಯಾಧಿಕಾರಿ (ತಾಂತ್ರಿಕ) ಡಾ.ಕಿರಣ ಕೊಪ್ಪದ, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಪರಮೇಶ ಹುಬ್ಬಳ್ಳಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಎಫ್.ಕರಿಯಪ್ಪನವರ, ಮಲ್ಲಿಕಾರ್ಜುನ ಮಾಗಿ, ಅಪ್ಪಾಸಾಬ ಕರಿಯಣ್ಣವರ ಹಾಗೂ ಇಲಾಖೆಯ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.