

ಹಾವೇರಿ: ಸ್ಥಳೀಯ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕದ ವತಿಯಿಂದ ನವೆಂಬರ್ 7ರಂದು ನಗರದಲ್ಲಿ ಅದ್ಧೂರಿಯಾಗಿ ವೀರರಾಣಿ ಕಿತ್ತೂರ ರಾಣಿ ಚನ್ನಮ್ಮನವರ 201 ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ 108 ಕುಂಭಗಳನ್ನು ಹೊತ್ತ ಮಹಿಳೆಯರು, ವೀರಗಾಸೆ, ವಾದ್ಯ ವೃಂದಗಳು ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ವೀರರಾಣಿ ಕಿತ್ತೂರು ಚನ್ನಮ್ಮನವರ ಭಾವಚಿತ್ರದ ಬೃಹತ್ ಮೆರವಣಿಗೆ ಆರಂಭವಾಗಲಿದೆ. ಎಂಜಿ ರಸ್ತೆ, ಜೆಪಿ ಸರ್ಕಲ್ ಮೂಲಕ ಹೊಸಮನಿ ಸಿದ್ದಪ್ಪ ವೃತ್ತ, ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ಗುರುಭವನದವರೆಗೆ ಮೆರವಣಿಗೆ ಸಾಗಲಿದೆ ಎಂದರು.
ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಗುರು ಭವನದಲ್ಲಿ ಜಯಂತ್ಯುತ್ಸವ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಎಲ್ಲ ಶಾಸಕರು, ಎಲ್ಲ ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಮಾಜ ಬಾಂಧವರು, ಚನ್ನಮ್ಮನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಳಿಯಪ್ಪ ಸೂರದ, ಸದಾನಂದ ಹಾದಿಮನಿ, ದಾನೇಶ ಕೆಂಗೊಂಡ, ಶಿವರಾಜ ಮತ್ತಿಹಳ್ಳಿ, ಕೊಟ್ರೇಶ ವಿಜಾಪುರ, ಲಲಿತಾ ಗುಂಡೇನಹಳ್ಳಿ, ಇತರರಿದ್ದರು.
ಭವನ, ವೃತ್ತಕ್ಕೆ ಅಡಿಗಲ್ಲು
ನಗರದ ಚನ್ನಮ್ಮ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಅಂದು ಬೆಳಗ್ಗೆ 11 ಗಂಟೆಗೆ ಅಡಿಗಲ್ಲು ಸಮಾರಂಭ ನೆರವೇರಲಿದೆ. ನಂತರ ಹಾನಗಲ್ಲ ರಸ್ತೆಯ ತುಳಸಿ ಐಕಾನ್‌ನಲ್ಲಿರುವ ಸಮಾಜದ ಜಾಗೆಯಲ್ಲಿ ಪಂಚಮಸಾಲಿ ಸಮುದಾಯ ಭವನ ಮತ್ತು ಹಾಸ್ಟೆಲ್ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ನೆರವೇರಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಡಾ.ಬಸವರಾಜ ವೀರಾಪುರ ತಿಳಿಸಿದರು.