

ಹಾವೇರಿ: ಉದ್ಯೋಗಂ ಪುರುಷ ಲಕ್ಷಣಂ ಎಂಬಂದತೆ ಆಧುನಿಕ ಕಾಲದಲ್ಲಿ ಮಹಿಳೆಯರೂ ಉದ್ಯೋಗ ಮಾಡುತ್ತಿದ್ದಾರೆ. ಆದರೆ, ಎಲ್ಲರಿಗೂ ಸರ್ಕಾರಿ ನೌಕರಿ ಸಿಗಲು ಸಾಧ್ಯವಿಲ್ಲ. ಸರ್ಕಾರಿ ನೌಕರಿಯೇ ಬೇಕು ಎಂದು ಕಾಲಹರಣ ಮಾಡಬೇಡಿ. ಅರ್ಹತೆಗೆ ತಕ್ಕ ಖಾಸಗಿ ಉದ್ಯೋಗಕ್ಕೆ ಸೇರಿ ಉತ್ತಮವಾದ ಜೀವನ ನಡೆಸಿರಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಯುವಕ- ಯುವತಿಯರಿಗೆ ಸಲಹೆ ನೀಡಿದರು.
ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ಹಾಗೂ ಶಿರಸಿಯ ಉತ್ತರ ಕನ್ನಡ ಜಿಲ್ಲಾ ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿ ಸಹಯೋಗದಲ್ಲಿ ನಗರದ ಮುನ್ಸಿಪಲ್ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಮೊದಲು ಲಂಚ ತೆಗೆದುಕೊಂಡು ಉದ್ಯೋಗ ಕೊಡುತ್ತಿದ್ದರು. ಈಗ ಅಂತಹ ಕಾಲ ಈಗ ಇಲ್ಲ. ಇಂತಹ ಉದ್ಯೋಗ ಮೇಳಗಳ ಮೂಲಕ ಅನೇಕ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತಿವೆ. ನಿಮ್ಮ ವಿದ್ಯಾಭ್ಯಾಸ, ತರಬೇತಿ, ಅರ್ಹತೆಗೆ ಅನುಗುಣವಾಗಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡು, ಉತ್ತಮವಾಗಿ ಕೆಲಸ ಮಾಡಿ. ನಿಮ್ಮ ಕಾರ್ಯಕ್ಷಮತೆ ತೋರಿಸಿ, ಭಡ್ತಿ ಪಡೆದು, ಮತ್ತೊಬ್ಬರಿಗೆ ಮಾದರಿಯಾಗಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರ ಅನುಕೂಲಕ್ಕಾಗಿ ಯುವನಿಧಿ ಯೋಜನೆ ಜಾರಿಗೊಳಿಸಿದೆ. ನಿರುದ್ಯೋಗಿಗಳು ಇಂತಹದ್ದೇ ಉದ್ಯೋಗ ಬೇಕು ಎಂದು ಸಮಯ ವ್ಯರ್ಥ ಮಾಡದೇ, ಸಿಕ್ಕ ಅವಕಾಶಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ಉನ್ನತ ಹುದ್ದೆ ಪಡೆಯಬೇಕು ಎಂದು ಕರೆ ನೀಡಿದರು. ರಾಘವೇಂದ್ರ ಬಾಸೂರ ತಂಡದ ಶ್ರಮದಿಂದ ಉದ್ಯೋಗ ಮೇಳ ಯಶಸ್ವಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿದರು. ಉತ್ತಮ ಶಿಕ್ಷಕರು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೇಳದಲ್ಲಿ ಟಾಟಾ ಸ್ಟ್ರೈವ್, ಟಾಟಾ ಎಐಜಿ, ಮುತ್ತೂಟ್ ಫೈನಾನ್ಸ್, ರಿಲಯನ್ಸ್, ವಾಯ್ಸ ಆಫ್ ನೀಡಿ ಫೌಂಡೇಶನ್ ಸೇರಿದಂತೆ 50ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದವು. ಸಾವಿರಾರು ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಬಿಇಒ ಉಮೇಶ ಬೊಮ್ಮಕ್ಕನವರ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಸೋನಾಲಿ ಕ್ಷೀರಸಾಗರ, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಚೇತನಕುಮಾರ, ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಶಂಕರ ಮೆಹರವಾಡೆ, ಪ್ರಧಾನ ಕಾರ್ಯದರ್ಶಿ ತಾರಕೇಶ ಮಠದ, ಎಂ.ಎಂ ಮೈದೂರ, ಪ್ರಭು ಬಿಷ್ಟನಗೌಡ್ರ, ಬಸವರಾಜ ಕುರಿಯವರ, ಶಿವಕುಮಾರ ಪಾಟೀಲ, ಮತ್ತಿತರರು ಪಾಲ್ಗೊಂಡಿದ್ದರು.
ಕೋಟ್
ಉದ್ಯೋಗ ಮೇಳದಲ್ಲಿ 56 ಕಂಪನಿಗಳು ಭಾಗವಹಿಸಿದ್ದವು. 1,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. 300ಕ್ಕೂ ಅಧಿಕ ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಸೆಕೆಂಡ್ ರೌಂಡ್‌ನಲ್ಲಿ ಮತ್ತಷ್ಟು ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಅಂಗವಿಕಲರಿಗೆ ವಿಶೇಷ ಅವಕಾಶಗಳು ದೊರೆತಿದ್ದು, ಉದ್ಯೋಗ ಮೇಳ ಅತ್ಯಂತ ಯಶಸ್ವಿಯಾಗಿ ಜರುಗಿದ್ದು, ನಮ್ಮ ಶ್ರಮ ಸಾಥ್ಕವಾಗಿದೆ.
- ರಾಘವೇಂದ್ರ ಬಾಸೂರ, ಅಧ್ಯಕ್ಷ, ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ