ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ ಮತದಾರರ ನೋಂದಣಿ ಪ್ರಕ್ರಿಯೆ ಶುರು; ಪದವೀಧರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ಬಾಸೂರ

Raghavendra Basur
Published on

ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ ಮತದಾರರ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಜಿಲ್ಲೆಯಲ್ಲಿರುವ ಅರ್ಹ ಪದವೀಧರು ಹಾಗೂ ಡಿಪ್ಲೋಮಾ ಪದವೀಧರರು ಆಯಾ ತಾಲೂಕಿನ ತಹಸೀಲ್ದಾರ್ ಹಾಗೂ ಬಿಇಒ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಮತದಾರರ ನೋಂದಣಿ ಮಾಡಿಸಿಕೊಳ್ಳುವಂತೆ ರಾಜ್ಯ ಪದವೀಧರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಘವೇಂದ್ರ ಬಾಸೂರ ಮನವಿ ಮಾಡಿಕೊಂಡರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಚುನಾವಣೆಗೆ ಮತದಾರರಾಗಲು ಪದವಿ ಹಾಗೂ ಡಿಪ್ಲೋಮಾ ಪದವಿಯನ್ನು ಪೂರೈಸಿರಬೇಕು. 2025 ಸೆಪ್ಟಂಬರ್ 1ರೊಳಗೆ ಮೂರು ವರ್ಷ ಪೂರ್ಣಗೊಂಡಿರುವ ಪದವೀಧರರು ಮಾತ್ರ ಅರ್ಹರಾಗಿರುತ್ತಾರೆ. ಅರ್ಹ ಪದವೀಧರರು ನ.6ರ ಒಳಗಾಗಿ ತಮ್ಮ ತಹಸೀಲ್ದಾರ್ ಹಾಗೂ ಬಿಇಒ ಕಚೇರಿಗಳಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಕಳೆದ ಬಾರಿ ಮತದಾರರಾಗಿದ್ದರೂ ಈ ಬಾರಿ ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಕೂಡ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ವಿಶ್ವಾಸವಿದೆ. ನಮ್ಮ ಜತೆಗೆ ಇನ್ನೂ ನಾಲ್ವರು ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತೇನೆ. ಈಗಾಗಲೇ ಹಾವೇರಿ, ಗದಗ, ಧಾರವಾಡ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದು, ನಾಲ್ಕು ಜಿಲ್ಲೆಯಲ್ಲಿ ಪದವೀಧರರ ನೋಂದಣಿ ಮಾಡಿಸುತ್ತಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಿ 400ರಿಂದ 500 ಜನ ಪದವೀಧರರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದೇವೆ ಎಂದರು.

ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಂತೆ ಶಿಕ್ಷಕರಿಗೆ ಎನ್‌ಪಿಎಸ್‌ನಿಂದ ಒಪಿಎಸ್ ಜಾರಿ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಸರ್ಕಾರಿ ನೌಕರರಿಗೆ, ಶಿಕ್ಷಕರಿಗೆ, ವಕೀಲರಿಗೆ, ಡಾಕ್ಟರ್‌ಗಳಿಗೆ, ಖಾಸಗಿ ನೌಕರರಿಗೆ ಹಾಗೂ ಪದವೀಧರ ರಕ್ಷಣೆ, ಉದ್ಯೋಗ ಸೃಷ್ಟಿ ಮತ್ತು ಸಮಸ್ಯೆಗಳ ಬಗೆಹರಿಸುವುದು ಆದ್ಯತೆಯಾಗಿದೆ. ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿಯನ್ನು ಕಾಂಗ್ರೆಸ್ ಸರ್ಕಾರ ನೀಡಿದ್ದು, ಅನುದಾನಿತ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಕೊಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಗದಿಗೆಪ್ಪ ನೆಲೋಗಲ್ಲ, ಸಂತೋಶ ಹರ್ತಿಕೋಟೆ, ಜಮೀರ ಜಿಗರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net