

ಹಾವೇರಿ: ಮನೆ ಕಟ್ಟುವ ಸಲುವಾಗಿ ಸಾಲ ಕೊಡುತ್ತೇವೆ ಎಂದು ಹೇಳಿ 4.70 ಲಕ್ಷ ರೂ. ಇಎಂಐ ಹಣ ತುಂಬಿಸಿಕೊಂಡು ಸಾಲದ ಹಣ ಸಹ ಕೊಡದೆ ಮೋಸ ಮಾಡಿರುವ ಮೈಕ್ರೋ ಫೈನಾನ್ಸ್ನ ಇಬ್ಬರು ಸಿಬ್ಬಂದಿ ವಿರುದ್ಧ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ನಗರದ ಹಿಂದುಜಾ ಫೈನಾನ್ಸ್ ಸಿಬ್ಬಂದಿ ಸುನೀಲ ಹಾಗೂ ಮಂಜುನಾಥ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಇವರ ವಿರುದ್ಧ ಸವಣೂರ ಪಟ್ಟಣದ ದಂಡಿನಪೇಟೆ ನಿವಾಸಿ ನಿರ್ಮಲಾ ಶರಣಯ್ಯ ಮಹಾಂತಿನಮಠ ಎಂಬುವರು ದೂರು ನೀಡಿದ್ದಾರೆ.
ಏನೀದು ಪ್ರಕರಣ...?
ನಿರ್ಮಲಾ ಅವರು ಹಾವೇರಿಯಲ್ಲಿ ಮನೆಯೊಂದನ್ನು ಖರೀದಿ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ ಹಿಂದುಜಾ ಫೈನಾನ್ಸ್ನಲ್ಲಿ 40 ಲಕ್ಷ ರೂ. ಸಾಲ ಕೇಳಿದ್ದರು. ಫೈನಾನ್ಸ್ನವರು ಮನೆಯನ್ನು ಮಾರ್ಡ್ಗೇಜ್ ಮಾಡಿಕೊಂಡು, ನಿಮಗೆ ಚೆಕ್ ಕೊಡುತ್ತೇವೆ ಎಂದು ಹೇಳಿ ಸಾಲದ ಮೊದಲ ಕಂತು ಇಎಂಐ 46 ಸಾವಿರ ರೂ. ಕಟ್ಟಿಸಿಕೊಂಡಿದ್ದರು. ನಂತರ ಮನೆ ಖರೀದಿ ಮಾಡಿಕೊಳ್ಳಲು ಬೇಕಾದ 37.43 ಲಕ್ಷ ರೂ. ಚೆಕ್ಅನ್ನು ಕೊಟ್ಟಿದ್ದರು. ನಿರ್ಮಲಾ ಹಣ ಡ್ರಾ ಮಾಡಿಕೊಳ್ಳಲು ಬ್ಯಾಂಕ್ಗೆ ಹೋದಾಗ ಬ್ಯಾಂಕ್ನವರು ಈ ಚೆಕ್ನ ರೀಪ್ರಿಂಟ್ ಡೇಟ್ ಮುಗಿದಿದೆ ಎಂದು ಹೇಳಿ ವಾಪಸ್ ಕಳುಹಿಸಿದ್ದರು.
ಆದ್ದರಿಂದ ವಾಪಸ್ ಬಂದು ಹಿಂದುಜಾ ಫೈನಾನ್ಸ್ನವರಿಗೆ ಕೇಳಿದರೆ, ಇಂದು&-ನಾಳೆ ಎಂದು ದಿನ ದುಡಿದ್ದಾರೆ. ಅಲ್ಲದೆ ನಮ್ಮಿಂದ ಇಎಂಐ ರೂಪದಲ್ಲಿ ಕಟ್ಟಿಸಿಕೊಂಡ 4.70 ಲಕ್ಷ ರೂ. ಕೂಡ ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ನಿರ್ಮಲಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.