ರೈತರ ಪಾಲಿಗೆ ‘ಕಣ್ಣೀರುಳ್ಳಿ’; ಕುಸಿದ ಈರುಳ್ಳಿ ಬೆಲೆ, ರೈತ ಕಂಗಾಲು; ಹೊಲದಲ್ಲೇ ಕೊಳೆಯುತ್ತಿದೆ ರಾಶಿ ರಾಶಿ ಬೆಳೆ; ಕ್ವಿಂಟಲ್‌ಗೆ 200ರಿಂದ 700 ರೂ.ಗೆ ಕುಸಿತ

23 HVR 3 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದ್ದು, ರಾಜ್ಯದ ಈರುಳ್ಳಿ ಬೆಳೆಗಾರರ ಪಾಲಿಗೆ ‘ಈರುಳ್ಳಿ’ ಈಬಾರಿ ‘ಕಣ್ಣೀರುಳ್ಳಿ’ ಆಗಿ ಪರಿಣಮಿಸಿದೆ. ದರ ಏರಿಕೆ ಕಾಣದ ಹಿನ್ನೆಲೆಯಲ್ಲಿ ಹೊಲದಲ್ಲೇ ರಾಶಿ ರಾಶಿ ಈರುಳ್ಳಿ ಮಳೆಗೆ ಕೊಳೆತು ಹೋಗುತ್ತಿದೆ. ಇದರ ಜತೆಗೆ ರೈತರ ಕಣ್ಣೀರೂ ಸೇರಿಕೊಂಡಿದೆ. ಕಳೆದ ವರ್ಷ ಈರುಳ್ಳಿ ದರ ಉತ್ತಮವಾಗಿದ್ದರೂ ಇಳುವರಿ ಕಡಿಮೆಯಾಗಿತ್ತು. ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ಈರುಳ್ಳಿ ಬೆಳೆದ ರೈತರು ಉತ್ತಮ ಆದಾಯ ಪಡೆದು ದೀಪಾವಳಿ ಹಬ್ಬ ಆಚರಿಸಲು ಮುಂದಾಗಿದ್ದರು. ಆದರೆ, ಈರುಳ್ಳಿ ಬೆಲೆ ಕುಸಿತ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ಒಂದು ತಿಂಗಳಿನಿಂದ ರಾಣೆಬೆನ್ನೂರ, ಹಾವೇರಿ, ಇತರ ತಾಲೂಕುಗಳ ರೈತರು ಈರುಳ್ಳಿ ಕಟಾವು ಮಾಡಿ ಹೊಲದಲ್ಲಿ ಗುಡ್ಡೆ ಹಾಕಿದ್ದಾರೆ. ಈರುಳ್ಳಿ ದರ ಕುಸಿತದಿಂದಾಗಿ ಮಾರುಕಟ್ಟೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ. ದರ ಹೆಚ್ಚಾದಾಗ ತೆಗೆದುಕೊಂಡು ಹೋಗಲು ಕಾಯುತ್ತಿದ್ದಾರೆ. ಈ ನಡುವೆ ಮಳೆ ಮತ್ತೆ ಶುರುವಾಗಿರುವ ಪರಿಣಾಮ ಹೊಲದಲ್ಲೇ ಈರುಳ್ಳಿ ಕೊಳೆತು ಹೋಗುತ್ತಿವೆ. ಜಿಲ್ಲೆಯಲ್ಲಿ 773 ಹೆಕ್ಟೇರ್ ಈರುಳ್ಳಿ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿಗೆ 200 ರೂ.ನಿಂದ 700 ರೂ.ವರೆಗೆ ದರ ನಿಗದಿಪಡಿಸಲಾಗಿದೆ. ಕನಿಷ್ಠ 2 ಸಾವಿರ ರೂ. ದರ ಸಿಕ್ಕರೆ ರೈತರು ನಿಟ್ಟುಸಿರು ಬಿಡುತ್ತಾರೆ. ಆದರೆ, ಸಣ್ಣ ಗಡ್ಡಿಗೆ 200, 200 ರೂ. ಕೇಳುತ್ತಿದ್ದಾರೆ. ಉತ್ತಮ ಗುಣಮಟ್ಟದ ಗಡ್ಡಿಗೂ ಕೇವಲ 700 ರೂ. ಕೇಳುತ್ತಾರೆ ವ್ಯಾಪಾರಿಗಳು. ಒಂದು ಎಕರೆಗೆ ಅಂದಾಜು 3ರಿಂದ 4 ಸಾವಿರ ರೂ. ಖರ್ಚು ಮಾಡಿದ್ದು, ಗೊಬ್ಬರ, ಕೀಟನಾಶಕ, ಕೂಲಿ ಆಳುಗಳ ಖರ್ಚು, ವಾಹನದ ಖರ್ಚು ಸೇರಿದರೆ ಕನಿಷ್ಠ ಖರ್ಚೂ ಕೈಸೇರುವುದಿಲ್ಲ ಎಂದು ರಾಣೆಬೆನ್ನೂರ ರೈತ ದಾನಪ್ಪ ಅಜ್ಜಪ್ಪನವರ ನೋವು ತೋಡಿಕೊಂಡರು.

ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಭಾಗದಿಂದ ನಾಸಿಕ್, ಇತರ ತಳಿಯ ಹೆಚ್ಚಿನ ಈರುಳ್ಳಿ ಬರುತ್ತಿದೆ. ಮುಂಗಾರು ಮಳೆ ಹೆಚ್ಚಾದ ಪರಿಣಾಮ ಈರುಳ್ಳಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ, ದರ ಕಡಿಮೆಯಾಗಿದೆ. ಒಣ ಗಡ್ಡೆ ಕಡಿಮೆಯಾಗಿದೆ. ಇದನ್ನು ಸಂಗ್ರಹಿಸಿ ಇಡಲೂ ಆಗುತ್ತಿಲ್ಲ ಎನ್ನುತ್ತಾರೆ ರೈತರು.

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಕನಿಷ್ಠ ದರ ನಿಗದಿಪಡಿಸುವ ಮೂಲಕ ರೈತರ ಬೆನ್ನಿಗೆ ನಿಲ್ಲುವ ನಿಟ್ಟಿನಲ್ಲಿ ಪಿಡಿಪಿಎಸ್ (ಪ್ರೈಸ್ ಡಿಸ್ಟ್ರಿಬ್ಯೂಶನ್ ಪೇಮೆಂಟ್ ಸಿಸ್ಟಂ) ಯೋಜನೆ ಜಾರಿ ಮಾಡಲು ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಇತರ ಜಿಲ್ಲೆಗಳಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ರೈತರು ಮಾರಾಟ ಮಾಡಿದ ಬಳಿಕ ಕನಿಷ್ಠ ಬೆಂಬಲ ಬೆಲೆಯ ಹೆಚ್ಚುವರಿ ಹಣವನ್ನು ಸರ್ಕಾರಗಳು ಭರಿಸುತ್ತವೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ತಿಳಿಸಿದರು.

ಕೋಟ್:

ನಂದು ಹೊಲ ಇಲ್ಲರೀ. ಎರಡು ಎಕರೆ ಹೊಲ ಲಾವಣಿ ಹಾಕೊಂಡು ಈರುಳ್ಳಿ ಬೆಳದಿದ್ದೆ. ಆದ್ರ, ಈ ಸಲ ರೇಟ್ ಸಿಗವಲ್ತು. 200, 400 ರೂ. ಕೇಳಕತ್ತಾರ. ಕೂಲಿ ರೊಕ್ಕನೂ ಬರಂಗಿಲ್ಲ. ಅದಕ್ಕ ಒಂದ್ ತಿಂಗಳಿಂದ ಹೊಲದಾಗ ಈರುಳ್ಳಿ ಬಿಟ್ಟೇನಿ. ಮಳಿ ಬಂದ್ ಕೊಳತು ಹೊಂಟವು. ಈಗರ ಸರ್ಕಾರ ನಮ್ಮ ನೋವು ಕೇಳಬೇಕರಿ ಸಾಹೇಬರ. ಇಲ್ಲಾಂದ್ರ ರೂಟರ್ ಹೊಡದು ಹೊಟ್ಟಿಗೆ ತಣ್ಣೀರ್ ಬಟ್ಟಿ ಹಾಕೋಬೇಕ್ ನೋಡ್ರಿ.

- ದಾನಪ್ಪ ಅಜ್ಜಪ್ಪನವರ, ಈರುಳ್ಳಿ ಬೆಳೆಗಾರ, ರಾಣೆಬೆನ್ನೂರ

ಕೋಟ್:

ಈರುಳ್ಳಿ ದರ ಕುಸಿತವಾಗಿರುವ ಪರಿಣಾಮ ಈರುಳ್ಳಿ ಬೆಳೆಗಾರರ ಬೆಂಬಲಕ್ಕಾಗಿ ಪಿಡಿಪಿಎಸ್ (ಪ್ರೈಸ್ ಡಿಸ್ಟ್ರಿಬ್ಯೂಶನ್ ಪೇಮೆಂಟ್ ಸಿಸ್ಟಂ) ದರ ನಿಗದಿಪಡಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದರೆ ಆದೇಶದ ಅನ್ವಯ ಕ್ರಮ ಜರುಗಿಸಲಾಗುವುದು.

- ಸಿದ್ದರಾಮಯ್ಯ ಬರಗಿಮಠ, ಡಿಡಿ, ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net