

ಹಾವೇರಿ: ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ಈ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟಿಸಿದರು. ಘೋಷಣೆ ಮೂಲಕ ಆಕ್ರೋಶ ಹೊರಹಾಕಿದರು.
2011ರ ಜನಗಣತಿ ವರದಿಯಂತೆ ಕರ್ನಾಟಕದಲ್ಲಿ ಎಸ್‌ಸಿ 101 ಜಾತಿಗಳಿದ್ದು, ಒಟ್ಟು ಜನಸಂಖ್ಯೆ 1,04,74,992 ಇದೆ. ಈಗಿರುವ ಶೇ.17ರ ಮೀಸಲಾತಿಯನ್ನು ವರ್ಗಿಕರಿಸಿದರೆ ತಲಾ 6 ಲಕ್ಷ ಜನಸಂಖ್ಯೆಗೆ ಶೇ.1ರಷ್ಟು ಮಿಸಲಾತಿ ದೊರೆಯುತ್ತದೆ. ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಹಕ್ಕು ಇದೆ ಎಂದು ಸುಪ್ರೀಂ ಪೀಠವು ತೀರ್ಪು ನೀಡಿದೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ.
ಒಳಮೀಸಲಾತಿ ವರ್ಗೀಕರಣದಿಂದ ಎಲ್ಲ ಜಾತಿಗಳಿಗೂ ಸಮಾನತೆ ದೊರೆಯುತ್ತದೆ. 2005ರಲ್ಲಿ ರಚಿಸಿದ ನ್ಯಾ.ಎ.ಜೆ.ಸದಾಶಿವ ಏಕ ಸದಸ್ಯ ಆಯೋಗವು ರಾಜ್ಯದಲ್ಲಿ 101 ಎಸ್‌ಸಿ ಸಮುದಾಯದ ಜಾತಿ ಕೌಟುಂಬಿಕ ಸಮೀಕ್ಷೆ ನಡೆಸಿ ಸಮಗ್ರ ಅಧ್ಯಯನದ ವರದಿಯನ್ನು 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಅದರ ದತ್ತಾಂಶಗಳು ಸರ್ಕಾರದ ಬಳಿ ಇವೆ. ಸುಪ್ರೀಂ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಪ್ರಕಟಿಸಬೇಕು ಪ್ರತಿಭಟನಾಕಾರರು ಆಗ್ರಹಿಸಿದರು.
ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ಸಮಾಜದ ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶ್ವರಪ್ಪ ಮೇಳಗಮನಿ, ಉಡಚಪ್ಪ ಮಾಳಗಿ, ಬಸವರಾಜ ಹೆಡಿಗೊಂಡ, ನೀಲಕಂಠಪ್ಪ ಕುಸಗೂರ, ಬಿ.ಆರ್.ಪುಟ್ಟಣ್ಣನವರ, ಪುಟ್ಟಣ್ಣನವರ, ರುದ್ರಪ್ಪ ಹರಿಜನ, ಇತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಎಂ.ಆಜಂನೇಯ, ಎಸ್.ಜಿ.ಹೊನ್ನಪ್ಪನವರ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಅಶೋಕ ಮರೆಣ್ಣನವರ, ಅಶೋಕ ಮರೋಳ, ಏಳುಕೋಟೆಪ್ಪ ಪಾಟೀಲ, ಮಹಾದೇವಪ್ಪ ಮಾಳಮ್ಮನವರ, ಮಾಲತೇಶ ಯಲ್ಲಾಪುರ, ಡಾ.ಮಲ್ಲೇಶಪ್ಪ ಹರಿಜನ, ತಿರಕಪ್ಪ ಚಿಕ್ಕೇರಿ, ಪ್ರೇಮಾ ಕಲಕೇರಿ, ರೇಣುಕಾ ಕೆಂಚನಲ್ಲನವರ, ಸಂತೋಷ ಗುಡ್ಡಪ್ಪನವರ, ಮಾರುತಿ ಸೊಟ್ಟಪ್ಪನವರ, ರಾಜಶೇಖರ ಮಾದರ, ಸುರೇಶ ಆಸಾದಿ, ನಾಗರಾಜ ಹಾವನೂರ, ಮರಿಯಪ್ಪ ನಡುವಿನಮನಿ, ಸುಭಾಷ ಮಾಳಗಿ, ರಾಜು ಮಾದರ, ಫಕ್ಕಿರೇಶ ಕಾಳಿ, ರವಿ ದಂಡಿನ, ಜಗದೀಶ ಹರಿಜನ, ಸುಭಾಷ ಬೆಂಗಳೂರು, ಸುನೀಲ ಬೆಟಗೇರಿ, ಆನಂದ ಮುರಡೆಪ್ಪನವರ, ಸೇರಿ ಹಲವರು ಪಾಲ್ಗೊಂಡಿದ್ದರು.