ಬಸ್ ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಸ್ವಚ್ಛತಾ ಅಭಿಯಾನ; ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಹೇಳಿಕೆ

14 HVR 6
Published on

ಹಾವೇರಿ: ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ವಾಕರಸಾ ಸಂಸ್ಥೆ ನಮ್ಮ ಬಸ್ ನಿಲ್ದಾಣ, ಸ್ವಚ್ಛ ಬಸ್ ನಿಲ್ದಾಣ ಎಂಬ ಹೆಸರಿನಲ್ಲಿ ಕ್ಯೂಆರ್ ಕೋಡ್ ಮೂಲಕ ಸ್ವಚ್ಚತಾ ಅಭಿಯಾನ ಆರಂಭಿಸಿದೆ. ಸಾರ್ವಜನಿಕರು ಕ್ಯೂಆರ್ ಕೋಡ್ ಬಳಸಿ ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಂಸ್ಥೆಗೆ ನೀಡಬಹುದು ಎಂದು ಹಾವೇರಿ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಆರ್.ಪಾಟೀಲ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ, ನಿಲ್ದಾಣದ ಸ್ವಚ್ಛತೆ ಪರಿಶೀಲಿಸಿದರು. ನಿಲ್ದಾಣವನ್ನು ಉತ್ತಮವಾಗಿ ನಿರ್ವಹಿಸಲು ಸಂಸ್ಥೆಯ ಸಿಬ್ಬಂದಿಗೆ ತಿಳಿಸಿದರು. ಸಾರ್ವಜನಿಕರಿಗೆ ಬಸ್ ನಿಲ್ದಾಣದ ನಿರ್ವಹಣೆಯ ಕುರಿತು ಕ್ಯೂಆರ್ ಕೋಡ್ ಮೂಲಕ ಅಭಿಪ್ರಾಯ ಸಲ್ಲಿಸುವಂತೆ ಅರಿವು ಮೂಡಿಸಿದರು.

ರಾಜ್ಯದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಪ್ರಥಮ ಬಾರಿಗೆ ಇಂತಹ ಪ್ರಯೋಗಕ್ಕೆ ಮುಂದಾಗಿದೆ. ಈ ಅಭಿಯಾನದಲ್ಲಿ ಬಸ್ ನಿಲ್ದಾಣಗಳ ಸ್ವಚ್ಛತೆ, ಶೌಚಗೃಹ ನಿರ್ವಹಣೆ, ತ್ಯಾಜ್ಯ, ವಿಲೇವಾರಿ, ಶೌಚಗೃಹದ ದರ ಪಟ್ಟಿ ಅಳವಡಿಕೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸಂಚಾರ ನಿಯಂತ್ರಕರು ಪ್ರಯಾಣಿಕರೊಂದಿಗೆ ಸೌಜನ್ಯದ ನಡವಳಿಕೆ ಇತ್ಯಾದಿ ಅಂಶಗಳ ಕುರಿತು ಮೌಲ್ಯಮಾಪನ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದರು.

ಅಭಿಪ್ರಾಯ ಹಾಗೂ ಸಲಹೆ ಜತೆಗೆ ಆ ಬಸ್ ನಿಲ್ದಾಣಕ್ಕೆ ರ‌್ಯಾಂಕ್ ಕೂಡಾ ಕೊಡಬಹುದುದು. ನೀವು ಕೊಡುವ ರ‌್ಯಾಂಕ್ ಆಧಾರದ ಮೇಲೆಯೇ ಉತ್ತಮ ರೀತಿಯ ಸ್ವಚ್ಛತೆ ಕಾಪಾಡುವ ಬಸ್ ನಿಲ್ದಾಣಗಳನ್ನು ಹಾಗೂ ಅಲ್ಲಿನ ಸಿಬ್ಬಂದಿಗೆ ನಮ್ಮ ಬಸ್ ನಿಲ್ದಾಣ ಸ್ವಚ್ಛ ನಿಲ್ದಾಣ ಎಂಬ ಶಿರ್ಷಿಕೆಯಡಿ ಬಹುಮಾನ, ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net