ಜಿಲ್ಲೆಗೆ ತಟ್ಟದ ಸಾರಿಗೆ ನೌಕರರ ಮುಷ್ಕರದ ಬಿಸಿ; ಎಂದಿನಂತೆ ಸಹಜವಾಗಿತ್ತು ಬಸ್‌ಗಳ ಸಂಚಾರ

ZP CEO Visit
Published on

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ನೌಕರರು ಮಂಗಳವಾರ ಮುಷ್ಕರ ಆರಂಭಿಸಿದ್ದಾರೆ. ಆದರೆ, ಹಾವೇರಿ ಜಿಲ್ಲೆಗೆ ಈ ಮುಷ್ಕರದ ಬಿಸಿ ತಟ್ಟಲಿಲ್ಲ. ಎಂದಿನಂತೆ ವಾಹನಗಳ ಸಂಚಾರ ಸಹಜವಾಗಿ ನಡೆಯಿತು.

ಬೆಳಗ್ಗೆ ಸಾರಿಗೆ ಬಸ್‌ಗಳ ಸಂಚಾರ ನಡೆಯುವ ಬಗ್ಗೆ ಪ್ರಯಾಣಿಕರಲ್ಲಿ ಅನುಮಾನವಿತ್ತು. ಹೀಗಾಗಿ, ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆ ಇತ್ತಾದರೂ ಸರ್ಕಾರಿ ರಜೆ ಇರದ ಕಾರಣ ಶಾಲಾ- ಕಾಲೇಜ್ ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ನೌಕರರು, ಕಾರ್ಮಿಕರು ಹೆಚ್ಚಾಗಿ ಬಸ್ ನಿಲ್ದಾಣಗಳಲ್ಲಿ ಆಗಮಿಸುತ್ತಿದ್ದರು. ಮುಷ್ಕರದ ಬಗ್ಗೆ ಗೊಂದಲದಲ್ಲಿದ್ದ ಸಿಬ್ಬಂದಿ, ಅಧಿಕಾರಿಗಳ ಮಾತಿಗೆ ತಲೆಬಾಗಿ ಸೇವೆಗೆ ಹಾಜರಾದರು.

ಬೆಳಗ್ಗೆ ಬಸ್‌ಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಶಿವಮೊಗ್ಗ, ಸವದತ್ತಿ ಯಲ್ಲಮ್ಮನ ಗುಡ್ಡ, ಹಾಗೂ ಇತರೆಡೆ ತೆರಳುವ ಕೆಲ ಪ್ರಯಾಣಿಕರು ಪರದಾಡಿದರು. ಬಳಿಕ ಕೆಲ ಹೊತ್ತಿನ ನಂತರ ಸಾರಿಗೆ ಬಸ್‌ಗಳು ಎಂದಿನಂತೆ ಸಂಚಾರ ಆರಂಭಿಸಿದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಸರಾಗವಾಗಿ ಒಂದು ಊರಿನಿಂದ ಮತ್ತೊಂದು ಊರಿನತ್ತ ಪ್ರಯಾಣ ಬೆಳೆಸಿದರು. ಹಾವೇರಿ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಬಸ್‌ಗಾಗಿ ಕಾದು ಕುಳಿತಿದ್ದೆ ಹತ್ತು ನಿಮಿಷದಲ್ಲಿ ಬಸ್ ಬಂತು ಎಂದು ಪ್ರಯಾಣಿಕ ನಾಗರಾಜ ತಳವಾರ ಹೇಳಿದರು. ರಾಣೆಬೆನ್ನೂರ, ಹಾನಗಲ್ಲ, ಗುತ್ತಲ, ಹಿರೇಕೆರೂರ ಸೇರಿ ವಿವಿಧೆಡೆ ಬಸ್‌ಗಳ ಸಂಚಾರ ಸಾಮಾನ್ಯವಾಗಿತ್ತು.

ಡೀಪೋಗಳಿಗೆ ಭದ್ರತೆ :

ಮುಷ್ಕರ ಹಿನ್ನೆಲೆ ಹಾವೇರಿ ನಗರದ ಆರ್‌ಟಿಒ ಬಳಿ ಇರುವ ಹಾವೇರಿ ಡೀಪೋ ಬಳಿ, ಹಾವೇರಿ ಬಸ್ ನಿಲ್ದಾಣ ಸೇರಿ ಜಿಲ್ಲೆಯ ಬಸ್ ನಿಲ್ದಾಣಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೆ ಪೊಲೀಸರು ಭದ್ರತೆ ಕೈಗೊಂಡಿದ್ದು ಕಂಡುಬಂತು.

586 ಬಸ್‌ಗಳ ಸಂಚಾರ

ಜಿಲ್ಲೆಯಲ್ಲಿ ಮಂಗಳವಾರ ಶೇ.100ರಷ್ಟು ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆದಿದೆ. ಎಲ್ಲ ಅನುಸೂಚಿ ಅನ್ವಯ ಕಾರ್ಯಾಚರಣೆ ನಡೆದಿದೆ. ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಸಾರಿಗೆ ಸಂಚಾರ ನಡೆಯಿತು. ಜಿಲ್ಲೆಯಲ್ಲಿ ಒಟ್ಟು ಆರು ಡಿಪೋದಲ್ಲಿ 586 ಬಸ್‌ಗಳಿದ್ದು, ಎಲ್ಲ 545 ರೂಟ್‌ಗಳಲ್ಲಿ ಸಂಚರಿಸಿವೆ ಎಂದು ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಆರ್. ಪಾಟೀಲ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net