

ಹಾವೇರಿ: ನೊಳಂಬ ಲಿಂಗಾಯತ ಸಂಘದ ವತಿಯಿಂದ ಬ್ಯಾಡಗಿ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಚಿಕ್ಕಬಾಸೂರ ಗ್ರಾಮದಲ್ಲಿ ಜ.14 ಮತ್ತು 15ರಂದು ರಾಜ್ಯಮಟ್ಟದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತ್ಯುತ್ಸವ ಜರುಗಲಿದೆ ಎಂದು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಾಸೂರ ಗ್ರಾಮದ ಎಂಪಿಎಂಸಿ ಆವರಣದ ಹಿಂಭಾಗದಲ್ಲಿ ಬೃಹತ್ ಪೆಂಡಾಲ್‌ನಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಎರಡು ದಿನಗಳ ಸಮಾವೇಶದಲ್ಲಿ ಕೃಷಿ, ಪರಿಸರ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಚಿಂತನೆ, ಉಪನ್ಯಾಸ ಗೋಷ್ಠಿಗಳು ಜರುಗಲಿವೆ. ಬ್ಯಾಡಗಿ, ಕಾಗಿನೆಲೆ, ಹಾವೇರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಿಂದ ಸುಮಾರು 3 ಲಕ್ಷಕ್ಕೂ ಅಧಿಕ ಜನ ಆಗಮಿಸುವ ನಿರೀಕ್ಷೆ ಇದೆ ಎಂದರು.
ಜ.14ರಂದು ಬೆಳಗ್ಗೆ 7.30ಕ್ಕೆ ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಸಿದ್ದರಾಮೇಶ್ವರರ ಮೆರವಣಿಗೆಯನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ವಚನ ಗಾಯನ ಮತ್ತು ಭಕ್ತಿ ಗೀತೆಗಳ ಗಾಯನ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ನಂದಿಗುಡೊಯ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮತ್ತಿತರ ಸಂತರು, ಗಣ್ಯರು ಪಾಲ್ಗೊಳ್ಳುವರು. ಮಧ್ಯಾಹ್ನ 3ಕ್ಕೆ ಶರಣ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇತರರು ಪಾಲ್ಗೊಳ್ಳುವರು. ಸಂಜೆ 6.30ಕ್ಕೆ ಸಾಂಸ್ಕೃತಿಕ ಸಮಾರಂಭ ಜರುಗಲಿವೆ ಎಂದರು.
ಜ.15ರಂದು ಬೆಳಗ್ಗೆ 6.30ಕ್ಕೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9ಕ್ಕೆ ಮಹಿಳಾ ಗೋಷ್ಠಿ, ಬೆಳಗ್ಗೆ 11ಕ್ಕೆ ಕೃಷಿ ಗೋಷ್ಠಿ ಜರುಗಲಿದೆ. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ರುದ್ರಪ್ಪ ಲಮಾಣಿ, ಇತರರು ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರಪ್ಪ ಕಣಗಲಬಾವಿ, ಪ್ರಭುಲಿಂಗಪ್ಪ ದೊಡ್ಡಮನಿ, ಎಸ್.ಕೆ.ಮೆಣಸಿನಹಾಳ, ಮಲ್ಲೇಶಪ್ಪ ಅಡವಿ, ಎಸ್.ಆರ್.ಪಾಟೀಲ, ಕೆ.ಪಿ.ಬೆಣಗೇರಿ, ಎನ್.ಎಚ್.ಅನಗೌಡ್ರ, ಜಯಣ್ಣ ಮಲ್ಲಿಗಾರ, ಎಂ.ಎನ್.ಕೆಂಪಗೌಡ್ರ, ಮತ್ತಿತರರಿದ್ದರು.