ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ದಾಳಿ; 31 ಪ್ರಕರಣ ದಾಖಲು, 2,500 ರೂ. ದಂಡ ವಸೂಲಿ

23 HVR 3
Published on

ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ತಂಡ ಗುರುವಾರ ನಗರದ ವಿವಿಧ ಧೂಮಪಾನ ಅಡ್ಡೆಗಳು ಹಾಗೂ ಪಾನ್‌ಶಾಪ್‌ಗಳು ಸೇರಿ 31 ಅಂಗಡಿಗಳ ಮೇಲೆ ದಾಳಿ ನಡೆಸಿ, 2,500 ರೂ. ದಂಡ ವಸೂಲಿ ಮಾಡಿದೆ.
ಪರವಾನಿಗೆ ಪಡೆಯದೇ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ಹಾಗೂ ಕಾಯ್ದೆ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ, ನೇರ-ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿ, ಬೇಕರಿ, ಹೋಟೆಲ್ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದರು. ತಂಬಾಕು ನಿಯಂತ್ರಣ ಕಾಯ್ದೆ-2003ರ ಕಲಂ-4ರಡಿ 31 ಪ್ರಕರಣ ದಾಖಲಿಸಿ 2,500 ರೂ. ದಂಡ ವಸೂಲಿ ಮಾಡಿದರು. ಪರೋಕ್ಷವಾಗಿ ತಂಬಾಕು ಜಾಹೀರಾತು ಮಾಡುವ 14 ಫಲಕಗಳನ್ನು ತೆರವುಗೊಳಿಸಿದರು.
ತಂಡದಲ್ಲಿ ಹಾವೇರಿ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಜಿಲ್ಲಾ ತಂಬಾಕು ನಿಯಂತ್ರಣ ತಂಡದ ಸಾಮಾಜಿಕ ಕಾರ್ಯಕರ್ತ ದಾದಾಪೀರ್ ಹುಲಿಕಟ್ಟಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅಮೃತಗೌಡ ಪಾಟೀಲ, ಕೃಷ್ಣಪ್ಪ ಕನ್ನಮ್ಮನವರ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪರಿಮಳಾ ಕರಮಡಿ, ಕಂದಾಯ ಅಧಿಕಾರಿಗಳಾದ ದುಗ್ಗೇಶ ಬಿ.ಎಂ, ಅಲ್ತಮಶ್, ಗಿರೀಶ ಹರವಿ, ಮಹೇಶ ಕುಮ್ಮೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net