ತಾಲೂಕಿಗೊಂದು ತಂಬಾಕು ಮುಕ್ತ ಗ್ರಾಮ ಘೋಷಿಸಿ; ಡಿಸಿ ರಘುನಂದನ ಮೂರ್ತಿ ಸೂಚನೆ

16 HVR 6
Published on

ಹಾವೇರಿ: ನವೆಂಬರ್ ತಿಂಗಳಾಂತ್ಯದೊಳಗೆ ಎಲ್ಲ ಶಾಲಾ-ಕಾಲೇಜ್ ಹಾಗೂ ಸರ್ಕಾರಿ ಕಚೇರಿಗಳು ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆಯಾಗಬೇಕು. ಕನಿಷ್ಠ ಪ್ರತಿ ತಾಲೂಕಿನ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಬೇಕು. ಎಲ್ಲೆಡೆ ನಾಮಫಲಕ ಅಳವಡಿಕೆ ಪೂರ್ಣಗೊಳ್ಳಬೇಕು. ಜಿಲ್ಲಾಧಿಕಾರಿಗಳ ಕಚೇರಿಂದಲೇ ಈ ಕೆಲಸ ಆರಂಭಿಸಬೇಕು ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ಮುಕ್ತ ಶಾಲಾ-ಕಾಲೇಜ್ ಘೋಷಣೆ ಕಾರ್ಯಕ್ರಮ ಅನುಷ್ಠಾನದಲ್ಲಿ ನಿಧಾನ ಧೋರಣೆ ತೋರುತ್ತಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾಲಮಿತಿಯೊಳಗೆ ಈ ಕೆಲಸ ಪೂರ್ಣಗೊಳಿಸಿ. ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡಿ ತ್ವರಿತಗತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಖಡಕ್ ಸೂಚನೆ ನೀಡಿದರು.
ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಎಲ್ಲ ಶಾಲಾ-ಕಾಲೇಜ್‌ಗಳನ್ನು ಒಂಭತ್ತು ಅಂಶಗಳ ಟಿಒಎಫ್‌ಇಐ ಮಾರ್ಗಸೂಚಿ ಅನ್ವಯ ತಂಬಾಕು ಮುಕ್ತ ಶೈಕ್ಷಣಿಕ ವಲಯ ಎಂದು ಘೋಷಿಸಿ ನಾಮಫಲಕ ಅಳವಡಿಸಬೇಕು ಎಂದು ಪದವಿಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದುರ.
ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ತಂಬಾಕು ನಿಯಂತ್ರಣ ನಿಟ್ಟಿನಲ್ಲಿ ತನಿಖಾ ದಾಳಿಯಲ್ಲಿ ಸಮಿತಿಯ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಸಭೆಗಳಲ್ಲಿ ದಾಳಿಯ ನಿಖರವಾದ ಮಾಹಿತಿಯೊಂದಿಗೆ ಹಾಜರಾಗಬೇಕು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಸೇವೆಯ ದುಷ್ಪರಿಣಾಮಗಳ ಕುರಿತು ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಕಾರ್ಯರೂಪಕ್ಕೆ ತನ್ನಿ ಎಂದು ಟಿಎಚ್‌ಒಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ.ನಿಲೇಶ, ಡಾ.ಜಗದೀಶ, ಡಾ.ಪ್ರಭಾಕರ, ತಾಲೂಕು ಆರೋಗ್ಯಾಧಿಕಾರಿಗಳು, ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
55 ಸಾವಿರ ರೂ. ದಂಡ ವಸೂಲಿ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 102 ತಂಬಾಕು ತನಿಖಾ ದಾಳಿ ನಡೆಸಿ, 646 ಪ್ರಕರಣ ದಾಖಲಿಸಲಾಗಿದೆ. 55,350 ರೂ. ದಂಡ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯ 1,892 ಶಾಲೆಗಳ ಪೈಕಿ 1,860 ಶಾಲೆಗಳನ್ನು ಹಾಗೂ 126 ಕಾಲೇಜ್‌ಗಳ ಪೈಕಿ 78 ಕಾಲೇಜ್‌ಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳೆಂದು ಘೋಷಿಸಲಾಗಿದೆ. ಶಾಲೆಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 818 ತಂಬಾಕು ವ್ಯಸನಿಗಳಿಗೆ ಆಪ್ತ ಸಮಾಲೋಚನೆ ಮೂಲಕ ತಿಳಿವಳಿಕೆ ಹಾಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಡಾ.ಸಂತೋಷ ದಡ್ಡಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net