ತ್ಯಾಗ ಮಾಡಿದವರಿಗೆ ನಿಗಮ ಮಂಡಳಿ ಪಟ್ಟ ? ಆಸಕ್ತಿ ತೋರದ ಜಿಲ್ಲೆಯ ಶಾಸಕರು; ಮುಂಚೂಣಿಯಲ್ಲಿ ಹಲವು ಘಟಾನುಘಟಿಗಳು

Nigama Mandali Story
Published on
  • ಕೇಶವಮೂರ್ತಿ ವಿ.ಬಿ. ಹಾವೇರಿ
    ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಶಾಸಕರನೇಕರು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನಾದರೂ ಪಡೆಯೋಣ ಎಂದು ಲಾಭಿ ನಡೆಸುತ್ತಿದ್ದರೆ, ಜಿಲ್ಲೆಯ ಕಾಂಗ್ರೆಸ್ ಶಾಸಕರು ಮಾತ್ರ ನಿಗಮ ಮಂಡಳಿಯತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಆಕಾಂಕ್ಷಿಯಾಗಿದ್ದು, ಟಿಕೆಟ್ ತ್ಯಾಗ ಮಾಡಿದ್ದ ಕೆಲ ಪ್ರಮುಖ ಮುಖಂಡರಿಗೆ ನಿಗಮ ಮಂಡಳಿ ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ.
    ಮೊದಲ ಹಂತದಲ್ಲಿ 21 ಶಾಸಕರನ್ನು ನಿಗಮ ಮಂಡಳಿಗೆ ಆಯ್ಕೆ ಮಾಡುವ ಕುರಿತು ಸರ್ಕಾರ ಮಟ್ಟದಲ್ಲಿ ಸುಧೀರ್ಘ ಚರ್ಚೆ ನಡೆದಿದೆ. ನಿಗಮ ಮಂಡಳಿಯ ಸಂಭಾವ್ಯರ ಪಟ್ಟಿಯಲ್ಲಿ ಜಿಲ್ಲೆಯ ಯಾವ ಶಾಸಕರ ಹೆಸರು ಇಲ್ಲ. ಈ ಬಗ್ಗೆ ಐವರು ಕಾಂಗ್ರೆಸ್ ಶಾಸಕರ ಪೈಕಿ ಯಾರೊಬ್ಬರೂ ಅಷ್ಟೇನು ತಲೆಕೆಡಿಸಿಕೊಂಡಿಲ್ಲ.
    ಹಾಗಾಗಿ, ಈ ಅವಕಾಶ ಈ ಬಾರಿ ಪಕ್ಷದ ಪ್ರಮುಖ ಮುಖಂಡರಿಗೆ ಒಲಿದು ಬರಲಿದೆ. ಅದರಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ತ್ಯಾಗ ಮಾಡಿದ್ದ ಬ್ಯಾಡಗಿಯ ಕೈಮುಖಂಡ ಎಸ್.ಆರ್.ಪಾಟೀಲ, ಹಿರೇಕೆರೂರಿನ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಹಾವೇರಿಯ ಎಂ.ಎಂ.ಹಿರೇಮಠ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಟಿಕೆಟ್ ತ್ಯಾಗ ಮಾಡಿದ್ದರ ಜತೆಗೆ ಪಕ್ಷಕ್ಕಾಗಿ ದುಡಿದ ಫಲವಾಗಿ ಈ ಅವಕಾಶ ಒದಗಿಬರುವ ಸಾಧ್ಯತೆ ಇದೆ.
    ನಿಗಮ ಮಂಡಳಿ ಅಂತಿಮ ಪಟ್ಟಿ ಘೋಷಣೆಗೆ ಸರ್ಕಾರ ಅಂತಿಮ ಹಂತದ ತಯಾರಿ ಮಾಡಿಕೊಂಡಿದ್ದು, ಜಿಲ್ಲೆಯ ಯಾರಿಗೆ ಯಾವ ಸ್ಥಾನ ಒಲಿಯುತ್ತದೋ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಕೊನೆ ಘಳಿಗೆಯಲ್ಲಿ ಜಿಲ್ಲೆಯ ಕೆಲ ಶಾಸಕರನ್ನೇ ಆಯ್ಕೆ ಮಾಡಿದರೂ ಅಚ್ಚರಿಪಡಬೇಕಿಲ್ಲ. ಲೋಕಸಭೆ ಚುನಾವಣೆಗೆ ಇದು ಸಹಕಾರಿಯಾಗಬಹುದು ಎನ್ನುವ ಚಿಂತನೆ ಕೈಪಡೆಯಲ್ಲಿ ನಡೆದಿದೆ.
    ಸಚಿವ ಸ್ಥಾನದ ಮೇಲೆ ಕಣ್ಣು
    ಜಿಲ್ಲೆಯ ಕೆಲ ಹಿರಿಯ ಶಾಸಕರು ಎಂಎಸ್‌ಐಎಲ್, ಬಿಡಿಎನಂಥ ಬೃಹತ್ ನಿಗಮ ಮಂಡಳಿಗೆ ಹೊಂಚು ಹಾಕಿದ್ದರು. ಆದರೆ, ಅದು ಸಫಲವಾಗಿಲ್ಲ ಎನ್ನಲಾಗಿದೆ. ಲಂಬಾಣಿ ಸಮುದಾಯದ ಏಕೈಕ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಆರಂಭದಲ್ಲಿ ಭಾರಿ ಒತ್ತಡ ಸೃಷ್ಟಿಯಾಗಿತ್ತು. ಅವರಿಗೆ ಮುಖ್ಯಮಂತ್ರಿಯವರು ವಿಧಾಸಭೆ ಉಪ ಸಭಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸಿದರು. ಮಾಜಿ ಸಚಿವ, ಶಾಸಕ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ ಅವರು ಯಾವುದೇ ರೀತಿಯ ಲಾಭಿಗೆ ಮುಂದಾಗಿಲ್ಲ ಎನ್ನುತ್ತದೆ ಕೈಪಡೆ.
    ನಿರ್ದೇಶಕ ಸ್ಥಾನಕ್ಕೆ ಪೈಪೋಟಿ
    ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಂದು ಕಡೆಯಾದರೆ ನಿರ್ದೇಶಕ ಸ್ಥಾನಗಳಿಗಾಗಿ ಜಿಲ್ಲೆಯ ಪ್ರಮುಖ ಮುಖಂಡರು ತಾಲೀಮು ನಡೆಸಿದ್ದಾರೆ. ಪ್ರಮುಖ ಮಂಡಳಿಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ನೆಚ್ಚಿನ ಶಾಸಕರು, ಮಂತ್ರಿಗಳ ಹಿಂದೆ ದುಂಬಾಲು ಬಿದ್ದಿದ್ದಾರೆ. ಒಂದು ಮಾಹಿತಿಯ ಪ್ರಕಾರ ಜಿಲ್ಲೆಯ ಒಂದೊಂದು ತಾಲೂಕಿನಿಂದ ಸುಮಾರು ನಾಲ್ಕರಿಂದ ಐದು ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಒಟ್ಟು 20ಕ್ಕೂ ಅಧಿಕ ಜನರಿಗೆ ನಿರ್ದೇಶಕ ಸ್ಥಾನ ದೊರೆಯುವ ನಿರೀಕ್ಷೆಇದೆ ಎಂದು ಮೂಲಗಳು ತಿಳಿಸಿವೆ.
  • ಕೋಟ್:
    ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ನಾಯಕರು ಭರವಸೆ ಕೊಟ್ಟಿದ್ದರು. ಆದರೆ, ಆ ಭರವಸೆ ಈಡೇರಿಲ್ಲ. ಇದೀಗ ನಿಗಮ ಮಂಡಳಿ ಸ್ಥಾನವನ್ನು ಕೊಡುವ ನಿರೀಕ್ಷೆ ಇದೆ. ಘೋಷಣೆ ಆಗುವುದನ್ನೇ ಕಾಯುತ್ತಿದ್ದೇನೆ. ಒಳ್ಳೆಯ ನಿಗಮ ಮಂಡಳಿ ಕೊಟ್ಟರೆ ಸ್ವೀಕರಿಸುತ್ತೇನೆ.
    ಎಸ್.ಆರ್.ಪಾಟೀಲ, ಮಾಜಿ ಅಧ್ಯಕ್ಷ, ಜೈವಿಕ ಇಂಧನ ಮಂಡಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net