ಹೆದ್ದಾರಿಯಲ್ಲಿ ಕಾರು ಪಲ್ಟಿ, ಇಬ್ಬರ ದುರ್ಮರಣ; ಮಗು ಸೇರಿ ನಾಲ್ವರಿಗೆ ಗಾಯ

25 HVR 9 A
Published on

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಎರಡು ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡ ಭೀಕರ ಅಪಘಾತ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ನಲ್ಲಿ ಶನಿವಾರ ಸಂಜೆ ನಡೆದಿದೆ.
ಧಾರವಾಡ ನಿವಾಸಿಗಳಾದ ಚೇತನಾ ವೀರಭದ್ರಪ್ಪ (35) ಹಾಗೂ ದುಂಡೆಪ್ಪ ವೀರಪ್ಪ (75) ಮೃತಪಟ್ಟವರು. ವೀರಭದ್ರ, ಬಸವರಾಜ, ಚಂದ್ರಮತಿ ಹಾಗೂ ಎರಡು ವರ್ಷದ ಮಗು ವಿಹಾನ ಗಾಯಗೊಂಡವರು.
ರಬಕವಿ-ಬನಹಟ್ಟಿ ಮೂಲದ ಇವರು ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಿಂದ ಧಾರವಾಡ ಕಡೆಗೆ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರವಾಗಿ ಗಾಯಗೊಂಡ ಎರಡು ವರ್ಷದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net