

ಹಾವೇರಿ: ಹೊಸ ವರ್ಷದ ವೇಳೆ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮದ್ಯ ಮಾರಾಟವಾಗಿದೆ. ಮಂಗಳವಾರ ಒಂದೇ ದಿನ ಕೆಎಸ್‌ಡಿಸಿಎಲ್‌ನಿಂದ ದಾಖಲೆಯ 13,394 ಬಾಕ್ಸ್ ಮದ್ಯ, 4,955 ಬಾಕ್ಸ್ ಬಿಯರ್ ಸೇಲ್ ಮಾಡಲಾಗಿದೆ.
ಜಿಲ್ಲೆಯ ಜನತೆ ಮಂಗಳವಾರ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ನೃತ್ಯ ಮಾಡುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡರು. ಜನರ ಸಂಭ್ರಮ ಮುಗಿಲು ಮುಟ್ಟಿತ್ತು.
ಹಾವೇರಿ, ರಾಣೆಬೆನ್ನೂರ ಸೇರಿ ಜಿಲ್ಲೆಯಾದ್ಯಂತ ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗಿದ್ದ ಜನ ಮನೆಯ ಮುಂದೆ ರಂಗೋಲಿ ಬಿಡಿಸಿದ್ದರು. 12 ಗಂಟೆ ಆಗುತ್ತಿದ್ದಂತೆ ಸಂಗೀತದ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಕೇಕ್ ಕತ್ತರಿಸಿ ಹಂಚುವ ಮೂಲಕ ಖುಷಿಪಟ್ಟರು. ಪರಸ್ಪರ ಹೊಸ ವರ್ಷದ ಶುಭಾಷಯ ಕೋರಿದರು.
ದೇಗುಲಗಳಲ್ಲಿ ಪ್ರಾರ್ಥನೆ :
ಬುಧವಾರ ಬೆಳಗ್ಗೆಯಿಂದಲೇ ಭಕ್ತರು ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 2025ರ ಹೊಸ ವರ್ಷ ಶುಭಕರವಾಗಿರಲಿ. ಯಾವುದೇ ವಿಘ್ನಗಳು ಬಾರದಿರಲಿ ಎಂದು ಪ್ರಾರ್ಥಿಸಿದರು.