

ಕೇಶವಮೂರ್ತಿ ವಿ.ಬಿ. ಹಾವೇರಿ
ನಗರದ ಪಿಬಿ ರಸ್ತೆಯ ಪ್ರವಾಸಿ ಮಂದಿರದ ಪಕ್ಕದಲ್ಲಿ 3 ಎಕರೆ 22 ಗುಂಟೆ ಜಾಗದಲ್ಲಿ 18.75 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಕಟ್ಟಡ ನಿರ್ವಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2021ರ ಅಕ್ಟೋಬರ್ನಲ್ಲಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಕಾಮಗಾರಿಯ ಹೊಣೆಯನ್ನು ಕರ್ನಾಟಕ ಪೊಲೀಸ್ ಹೌಸಿಂಗ್ ಕಾಪೋರೇಶನ್ಗೆ ನೀಡಲಾಗಿದೆ. ದಾವಣಗೆರೆಯ ಎಂ.ಎಸ್. ಚಂದ್ರಪ್ಪ ಎಂಬುವವರು ಗುತ್ತಿಗೆ ಪಡೆದಿದ್ದಾರೆ. ಶೇ. 95ರಷ್ಟು ಕೆಲಸ ಪೂರ್ಣಗೊಂಡಿದ್ದು, ಅಲ್ಪಸ್ವಲ್ಪ ಕಾಮಗಾರಿ ಬಾಕಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಈ ಸ್ಥಳದಲ್ಲಿ ಮೊದಲು ಇದ್ದ ಹಳೆಯ 45 ವಸತಿ ಗೃಹಗಳನ್ನು ನೆಲಸಮಗೊಳಿಸಿ, ಸುಂದರವಾದ ಎಸ್ಪಿ ಕಚೇರಿ ನಿರ್ವಿುಸಲಾಗಿದೆ. 5,449 ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡ ನಿರ್ವಿುಸಲಾಗಿದೆ. ಒಟ್ಟು ನಾಲ್ಕು ಮಹಡಿಯ ಕಟ್ಟಡದಲ್ಲಿ ವಿವಿಧ ವಿಭಾಗಗಳು ಕಾರ್ಯ ನಿರ್ವಹಿಸಲಿವೆ. ನೆಲ ಮಹಡಿಯಲ್ಲಿ ವಾಹನ ರ್ಪಾಂಗ್, ಟಪಾಲು ವಿಭಾಗ, ದೂರು ವಿಭಾಗ ಮತ್ತು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ನಿರ್ವಿುಸಲಾಗಿದೆ. ಮೊದಲ ಮಹಡಿಯಲ್ಲಿ ಎಸ್ಪಿ ಮತ್ತು ಎಎಸ್ಪಿ ಕಚೇರಿ, ಆಡಳಿತ ಕಚೇರಿ, ಜಿಲ್ಲಾ ವಿಶೇಷ ಶಾಖೆ (ಡಿಸಿಬಿ) ಕಚೇರಿ, ಆಡಳಿತ ಕಚೇರಿ, ಪಾಸ್ಪೋರ್ಟ್ ಹಾಗೂ ಮೀಟಿಂಗ್ ಹಾಲ್ ಸಿದ್ಧವಾಗಿದೆ.
ಎರಡನೇ ಅಂತಸ್ತಿನಲ್ಲಿ ಸಭಾಭವನ, ಜಿಲ್ಲಾ ಮಕ್ಕಳ ಘಟಕ ಕಂಪ್ಯೂಟರ್ ಕೊಠಡಿ, ಕಂಪ್ಯೂಟರ್ ತರಬೇತಿ ಕೇಂದ್ರ, ಅಪರಾಧ ವಿಭಾಗ, ಡಿಸಿಆರ್ಬಿ ವಿಭಾಗ ಕೆಲಸ ಮಾಡಲಿದೆ. ಮೂರನೇ ಮಹಡಿಯಲ್ಲಿ ಕಂಟ್ರೋಲ್ ರೂಮ್ ಮತ್ತು ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112 ರೂಮ್ ಟ್ರಾಫಿಕ್ ಮ್ಯಾನೇಜ್ವೆುಂಟ್ ಸೆಂಟರ್ ಇರಲಿದೆ.
ಹೊಸ ಎಸ್ಪಿ ಕಚೇರಿ ಉದ್ಘಾಟನೆ ಬಳಿಕ ಎಂಜಿ ರಸ್ತೆಯಲ್ಲಿರುವ ಹಳೇ ಎಸ್ಪಿ ಕಚೇರಿಗೆ ಜಿಲ್ಲಾ ಮೀಸಲು ಸಶಸ್ತ್ರ ಪಡೆ (ಡಿಎಆರ್), ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆ (ಸಿಇಎನ್) ಹಾಗೂ ಹಾವೇರಿ ಡಿವೈಎಸ್ಪಿ ಕಚೇರಿ ಸ್ಥಳಾಂತರಗೊಳ್ಳಲಿವೆ.
ಕೆರಿಮತ್ತಿಹಳ್ಳಿಯ ಹೆಗ್ಗೇರಿ ಕೆರೆ ದಂಡೆ ಬಳಿ 2002ರಲ್ಲಿ ಜಿಲ್ಲಾ ಪೊಲೀಸ್ ಕಚೇರಿ ನಿರ್ವಣಗೊಂಡಿತ್ತು. ಕೆರೆ ದಂಡೆ ಆದ್ದರಿಂದ ನೀರು ನುಗ್ಗುವ ಭೀತಿ ಇತ್ತು. 2009ರಲ್ಲಿ ಅತಿಯಾದ ಮಳೆ ವೇಳೆ ಕಟ್ಟಡ ಜಲಾವೃತಗೊಂಡಿತ್ತು. 2017ರಲ್ಲೂ ನೀರು ನುಗ್ಗಿತ್ತು. ಹಾಗಾಗಿ, ಜಿಲ್ಲಾ ನ್ಯಾಯಾಲಯದ ಹಳೇ ಕಟ್ಟಡಕ್ಕೆ 2018ರಲ್ಲಿ ಎಸ್ಪಿ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಶಾಶ್ವತ ಕಚೇರಿ ನಿರ್ವಣದ ಹಲವು ವರ್ಷಗಳ ಕನಸು ಕೊನೆಗೂ ನೆರವೇರಿದೆ. ನಗರದ ಹೃದಯ ಭಾಗದಲ್ಲಿರುವ ಕಾರಣ ಇಲಾಖೆಯ ಆಡಳಿತಕ್ಕೂ ಜನರಿಗೂ ಅನುಕೂಲವಾಗಲಿದೆ.
ಕರ್ನಾಟಕ ಪೊಲೀಸ್ ಹೌಸಿಂಗ್ ಕಾಪೋರೇಶನ್ ವತಿಯಿಂದ ನೂತನ ಎಸ್ಪಿ ಕಚೇರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸ ಬಾಕಿ ಇದೆ. ಉದ್ಘಾಟನೆ ದಿನಾಂಕವನ್ನು ಸರ್ಕಾರ ನಿರ್ಧಾರ ಮಾಡಲಿದೆ. ಉದ್ಘಾಟನೆ ಬಳಿಕ ನಮ್ಮ ಸುಪರ್ದಿಗೆ ಬರಲಿದೆ. | ಡಾ. ಶಿವಕುಮಾರ ಗುಣಾರೆ, ಎಸ್ಪಿ