ಹಾವೇರಿ, ಶಿಗ್ಗಾಂವಿ ಜಿಟಿಟಿಸಿ ಪ್ರವೇಶಾತಿ ಆರಂಭ; ಪ್ರಾಚಾರ್ಯ ಅಶ್ವಿನಕುಮಾರ ಸೋಮಣ್ಣನವರ

Published on

ಹಾವೇರಿ: ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಜಿಲ್ಲೆಯ ಮಕ್ಕಳ ಉತ್ತಮ ಭವಿಷ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏಕಕಾಲಕ್ಕೆ ಹಾವೇರಿ ಮತ್ತು ಶಿಗ್ಗಾಂವಿಯಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಆರಂಭಿಸಿದ್ದು ಮೇ 5ರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರವೇಶ ಆರಂಭಗೊಂಡಿವೆ ಎಂದು ತಾಲೂಕಿನ ನೆಲೋಗಲ್ಲ ಜಿಟಿಟಿಸಿ ಪ್ರಾಚಾರ್ಯ ಅಶ್ವಿನಕುಮಾರ ಸೋಮಣ್ಣನವರ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಮೀಪದ ನೆಲೋಗಲ್ಲ ಗ್ರಾಮದಲ್ಲಿ ಕಾಲೇಜ್ ಕಟ್ಟಡ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್, ಯಂತ್ರೋಪಕರಣಗಳ ಲ್ಯಾಬ್ ಆರಂಭಕ್ಕೆ ಸಿದ್ಧಗೊಂಡಿದೆ. ಶಿಗ್ಗಾಂವಿ ಪಟ್ಟಣದ ಕಲ್ಯಾಣ ಗ್ರಾಮದ ಟೆಕ್ಸ್‌ಟೈಲ್ಸ್ ಪಾರ್ಕ್‌ನ ಕಾಲೇಜ್ ಕಟ್ಟಡ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್, ಯಂತ್ರೋಪಕರಣಗಳ ಲ್ಯಾಬ್ ಸಿದ್ಧಗೊಂಡಿದೆ ಎಂದರು.

ಮೂರು ವರ್ಷಗಳ ಡಿಪ್ಲೊಮಾ ಮತ್ತು 1 ವರ್ಷದ ಕೈಗಾರಿಕಾ ತರಬೇತಿ ಸೇರಿದಂತೆ ಒಟ್ಟು ನಾಲ್ಕು ವರ್ಷಗಳ ಅಧ್ಯಯನದ ಮೂರು ಕೋರ್ಸ್‌ಗಳನ್ನು ಹಾವೇರಿಯಲ್ಲಿ ಆರಂಭಿಸಲಾಗುತ್ತಿದೆ. ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್, ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ ಹಾವೇರಿ ಕೇಂದ್ರದಲ್ಲಿದ್ದರೆ, ಇವುಗಳನ್ನೂ ಸೇರಿಸಿ ಡಿಪ್ಲೊಮಾ ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಹೆಚ್ಚುವರಿ ಕೋರ್ಸ್ ಸೇರಿ ಶಿಗ್ಗಾಂವಿ ಕೇಂದ್ರದಲ್ಲಿ ನಾಲ್ಕು ಕೋರ್ಸ್‌ಗಳಿವೆ. ಈ ಎಲ್ಲ ಕೋರ್ಸ್‌ಗೆ ತಲಾ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದ್ದು, ಪ್ರಸಕ್ತ ವರ್ಷ ಮೊದಲ ವರ್ಷದ ತರಗತಿಗೆ ಪ್ರವೇಶ ಸಿಗಲಿದೆ ಎಂದರು.

ಹಾವೇರಿ ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಔದ್ಯೋಗಿಕ ಬದುಕನ್ನು ಹಸನಾಗಿಸಲು ಇದು ಉತ್ತಮ ತರಬೇತಿ ಕೇಂದ್ರವಾಗಿ ಕೆಲಸ ಮಾಡಲಿದೆ. ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್‌ಗೆ ಹೆಚ್ಚಿನ ಬೇಡಿಕೆ ಇದ್ದು ಪ್ರತಿ ವರ್ಷ 1,800ರಿಂದ 2,000 ಜನರ ತರಬೇತಿಗೊಂಡ ಉತ್ತಮ ಉದ್ಯೋಗಿಗಳಿಗೆ ನಮ್ಮಲ್ಲಿ ಬೇಡಿಕೆ ಬರುತ್ತಿದೆ. ಮೂರು ವರ್ಷದ ಡಿಪ್ಲೊಮಾ ಪದವಿ ನಂತರ ಕೈಗಾರಿಕಾ ತರಬೇತಿಗೆ ಹೋಗುವವರಿಗೆ ಮಾಸಿಕ 15,000ರಿಂದ 20,000 ರೂ., ಸ್ಟೈಫಂಡ್ ಸಿಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಟಿಟಿಸಿ ಕೇಂದ್ರಗಳ ಮಾರ್ಗದರ್ಶಿ ಉಪನ್ಯಾಸಕರಾದ ಶ್ರೀಶೈಲ ಮತ್ತು ನಿರಂಜನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net