ನೆಲೋಗಲ್ಲ ಜಿಟಿಟಿಸಿಯಲ್ಲಿ ಪ್ರವೇಶಾತಿ ಪ್ರಾರಂಭ; ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಅವಕಾಶ

10 Ashwinkumar Somannanavar
Published on

ಹಾವೇರಿ: ತಾಲೂಕಿನ ನೆಲೋಗಲ್ಲ ಬಳಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ದಲ್ಲಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶಾತಿ ಸೀಟುಗಳು ಬಾಕಿ ಉಳಿದಿದ್ದು, ಜಿಲ್ಲೆಯಲ್ಲಿರುವ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಕೊಳ್ಳಬೇಕು ಎಂದು ಪ್ರಾಚಾರ್ಯ ಅಶ್ವಿನಕುಮಾರ ಸೋಮಣ್ಣನವರ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲೋಗಲ್ಲ ಜಿಟಿಟಿಸಿ ಕಾಲೇಜ್‌ನಲ್ಲಿ ಮೂರು ಡಿಪ್ಲೋಮಾ ಕೋರ್ಸ್‌ಗಳಿವೆ. ಈ ಪೈಕಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈಮೇಕಿಂಗ್ ಕೋರ್ಸ್‌ನ ಪ್ರವೇಶಾತಿ ಸೀಟುಗಳು ಭರ್ತಿಯಾಗಿವೆ. ಇನ್ನುಳಿದ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್‌ನಲ್ಲಿ 60 ಸೀಟುಗಳು ಹಾಗೂ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಕೋರ್ಸ್‌ನಲ್ಲಿ 40 ಸೀಟುಗಳು ಲಭ್ಯ ಇವೆ. ಈ ಕೋರ್ಸ್‌ಗಳಿಗೆ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಅರ್ಹರು ಎಂದರು.

ಡಿಪ್ಲೋಮಾ ಇಂಜನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಇದ್ದು, ವಿದೇಶದಲ್ಲೂ ಉತ್ತಮ ಅವಕಾಶಗಳಿವೆ. ಸ್ವಂತ ಉದ್ಯಮೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಸಹಾಯ ದೊರೆಯಲಿದೆ. ಮೂರು ವರ್ಷಗಳ ಡಿಪ್ಲೋಮಾ ಮತ್ತು 1 ವರ್ಷದ ಕೈಗಾರಿಕಾ ತರಬೇತಿ ಸೇರಿದಂತೆ ಒಟ್ಟು ನಾಲ್ಕು ವರ್ಷಗಳ ಅಧ್ಯಯನ ಮಾಡಬೇಕಾಗುತ್ತದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ಕೊಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಟಿಟಿಸಿ ಕೇಂದ್ರದ ಮಾರ್ಗದರ್ಶಿ ಉಪನ್ಯಾಸಕ ಶ್ರೀಶೈಲ ಪಟ್ಟಣಶೆಟ್ಟಿ, ಅಕ್ಷಯ ದಾನಪ್ಪನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net