

ಹಾವೇರಿ: ತಾಲೂಕಿನ ನೆಗಳೂರು ಗ್ರಾಮದ ಕೋಡಿ ದುರ್ಗಮ್ಮ ದೇವಸ್ಥಾನ ರಸ್ತೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಸಿಮೆಂಟ್ ರಸ್ತೆ ಮಾಡಿ, ಚರಂಡಿ ಮಾಡದೇ ಕೈಬಿಡಲಾಗಿದೆ. ಇದರಿಂದ ಸಣ್ಣ ಮಳೆಗೂ ರಸ್ತೆ ಮಧ್ಯದಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಇದು ಸ್ಥಳೀಯರ ನಿದ್ದೆಗೆಡಿಸಿದೆ. 2021-22ರ ಕೋವಿಡ್ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಅನುದಾನದಲ್ಲಿ ಹೊಸ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಆರಂಭ ಮತ್ತು ಅಂತ್ಯದಲ್ಲಿ ಎರಡೂ ಕಡೆ ಉಬ್ಬು ಇದ್ದು, ಮಧ್ಯದಲ್ಲಿ ತಗ್ಗು ಪ್ರದೇಶವಿದೆ. ಇದನ್ನು ಸರಿಪಡಿಸದೇ ವೈಜ್ಞಾನಿಕವಾಗಿ ರಸ್ತೆ ಮಾಡಲಾಗಿದೆ. ಅಕ್ಕಪಕ್ಕದಲ್ಲಿ ಚರಂಡಿಯನ್ನೇ ನಿರ್ಮಿಸಿಲ್ಲ. ಇದರಿಂದಾಗಿ ಈ ರಸ್ತೆ ಸಣ್ಣ ಮಳೆ ಬಂದರೂ ಕೆರೆಯಂತಾಗುತ್ತದೆ. ಬೈಕ್ ಸವಾರರು, ಪಾದಚಾರಿಗಳು ಓಡಾಡುವುದು ದುಸ್ತರವಾಗಿದೆ. ವೃದ್ದರು, ಮಕ್ಕಳಂತೂ ಭಯದಲ್ಲೇ ಹೆಜ್ಜೆ ಇಡುವಂತಾಗಿದೆ. ಯಾವಾಗ ಏನು ಅನಾಹುತ ಆಗುತ್ತದೋ ಎಂಬ ಆತಂಕ ಶುರುವಾಗಿದೆ. ವೈಜ್ಞಾನಿಕವಾಗಿ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ಮಾಡಿದರೆ ಸಾಕು ಇಲ್ಲಿನ ಸಮಸ್ಯೆ ಬಗೆಹರಿಯುತ್ತದೆ. ಈ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಆದರೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ. ರಸ್ತೆ ಅಕ್ಕಪಕ್ಕದಲ್ಲಿ ಹಲವು ಮನೆಗಳಿದ್ದು, ಚರಂಡಿ ಇಲ್ಲದ ಕಾರಣ ಮನೆಯ ಹಿತ್ತಲಲ್ಲಿ ಇಂಗು ಗುಂಡಿ ಮಾಡಿ ಚರಂಡಿ ನೀರು ಇಂಗಿಸಲಾಗುತ್ತಿದೆ. ಇದರಿಂದ ಇಲ್ಲಿನ ಜನರಲ್ಲಿ ರೋಗಭೀತಿ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕೂಡಲೇ ಇಲ್ಲಿ ಚರಂಡಿ ನಿರ್ಮಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರಾದ ಶರಶ್ಚಂದ್ರ ತಾವರೆ ಹಾಗೂ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಅನುದಾನ ಬಂದರೂ ಆಗಿಲ್ಲ ಕಾಮಗಾರಿ ?
ನರೇಗಾ ಯೋಜನೆಯಡಿ ಈ ರಸ್ತೆ ಪಕ್ಕದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಿಸಲು ಕಳೆದ ವರ್ಷ ಅನುದಾನ ಬಿಡುಡಗೆ ಆಗಿತ್ತು. ಆದರೂ ಗ್ರಾಪಂನಿಂದ ಚರಂಡಿ ಮಾಡಲು ಮುಂದಾಗುತ್ತಿಲ್ಲ. ಈ ಬಗ್ಗೆ ಕೇಳಿದರೆಗ್ರಾಪಂನ ಕೆಲ ಅಧಿಕಾರಿಗಳು ನೀವೇ ಚರಂಡಿ ಮಾಡಿಸಿ ಎನ್ನುತ್ತಾರೆ ಎಂಬ ಆರೋಪವಿದೆ.