ಮಕ್ಕಳ ಮೇಲೆ ಅತಿಯಾದ ಪ್ರೀತಿ ಬೇಡ; ನೆಗಳೂರ ಮುರಾರ್ಜಿ ವಸತಿ ಶಾಲೆಯ ಗುರುನಮನ ಸಮಾರಂಭದಲ್ಲಿ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ ಹೇಳಿಕೆ

23 HVR 3
Published on

ಹಾವೇರಿ: ಮಕ್ಕಳಿಗೆ ಅತಿಯಾದ ಪ್ರೀತಿ, ವಾತ್ಸಲ್ಯ ತೋರಬೇಡಿ. ಅಗತ್ಯಕ್ಕೆ ತಕ್ಕಂತೆ ಶಿಕ್ಷೆ ಕೊಡಿ, ಆಗ ಶಿಸ್ತು ಮೈಗೂಡುತ್ತದೆ. ಅತಿಯಾದ ಮಮಕಾರ, ವಾತ್ಸಲ್ಯದಿಂದಾಗಿ ಪಾಲಕರೇ ಮಕ್ಕಳ ಮೊದಲ ಶತ್ರುಗಳಾಗುತ್ತಾರೆ ಎಂಬುದನ್ನು ನೆನಪಿಡಿ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದರು.

ತಾಲೂಕಿನ ನೆಗಳೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸರ್ವಜ್ಞ ರಂಗಮಂದಿರದಲ್ಲಿ ಭಾನುವಾರ ಶಾಲಾ ಮಕ್ಕಳು ಹಾಗೂ ಪಾಲಕರಿಂದ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಒಬ್ಬ ಮಗು ಶ್ರೇಷ್ಠ ಪ್ರಜೆಯಾಗಲು ಪಾಲಕರು, ಶಿಕ್ಷಕ ಮತ್ತು ಗುಣಮಟ್ಟದ ಶಿಕ್ಷಣ ಪ್ರಮುಖವಾಗಿವೆ. ಮಕ್ಕಳಿಗೆ ಹಣದ ವ್ಯಾಮೋಹ ತೋರಬೇಡಿ. ಕಷ್ಟದ ಸೈರಣೆ, ಯಾವುದೇ ಸೌಲಭ್ಯ ಇಲ್ಲದಿರುವ ಕುರಿತಂತೆ, ಬದುಕನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿ. ಮಕ್ಕಳು ಯೋಗ್ಯರಾದರೆ ಸಂಪತ್ತಿನ ಅವಶ್ಯಕತೆ ಇಲ್ಲ, ಅಯೋಗ್ಯರಾದರೆ ಸಂಪತ್ತು ಉಳಿಯಲಾರದು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಎಂ.ಎಂ.ಮೈದೂರ ಮಾತನಾಡಿದರು. ಪಾಲಕರ ವತಿಯಿಂದ ಬಸವರಾಜ ಸಣ್ಣಗೋಣಿ, ಕರಬಸಪ್ಪ ಕುಬಸದ, ಬಿದ್ದಾಡೆಪ್ಪ ದೀಪಾಳಿ ಮಾತನಾಡಿದರು.

ಸಮಾರಂಭದಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ರ 137ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆ ಆಚರಿಸಲಾಯಿತು. ರಂಗಮಂದಿರದಲ್ಲಿ ಶಾರದಾ ಮಾತೆ ಕಲಾಕೃತಿ ಅನಾವರಣ ಹಾಗೂ ಶಾಲೆಯ ಬೋದಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಎಂ.ಎಂ.ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಯಾವಗಲ್ಲ, ಮುಖಂಡ ಹುಲ್ಲಪ್ಪ ಜಾಡರ, ಮಾಜಿ ಜಿಲ್ಲಾ ಸಮನ್ವಯಾಧಿಕಾರಿ ಶಂಭುಲಿಂಗಪ್ಪ ಹಿತ್ತಲಮನಿ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಕೆರೂರ, ನೀಲವ್ವ ಶಿಡ್ಲಣ್ಣನವರ, ಸುರೇಶ ಸಪ್ಪಣ್ಣನವರ, ಮತ್ತಿತರರು ಇದ್ದರು.

ಶಾಲ್ಯಾಗ ರಾಜಕೀಯ ಬ್ಯಾಡ..

ಊರಾಗ ರಾಜಕೀಯ ಮಾಡೋರು ಶಾಲ್ಯಾಗ ರಾಜಕೀಯ ಮಾಡಬ್ಯಾಡಿ. ಶಾಲ್ಯಾಗ ಪಾಠ ಮಾಡೋ ಮಾಸ್ತಾರು ಊರಾಗಿನ ರಾಜಕೀಯಕ್ಕೆ ಹೋಗಬ್ಯಾಡಿ. ಇವು ಎರಡೂ ಸಮಾಜದ ಆರೋಗ್ಯಕ್ಕೆ ಮಾರಕ. ಗುರುಕುಲ ಪದ್ಧತಿಯಂತೆ ಅಪ್ಪ- ಅವ್ವಾರು ಕನಿಷ್ಠ 12 ವರ್ಷ ಮಕ್ಕಳಿಂದ ದೂರ ಇದ್ದು, ಅವರ ಭವಿಷ್ಯಕ್ಕಾಗಿ ಹರಸಿ. ಆಗ ನಿಮ್ ಮಕ್ಕಳು ಆಸ್ತಿ ಆಗತಾರ ಎಂದು ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಮಾರ್ಮಿಕವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net