

ಹಾವೇರಿ: ತಾಲೂಕಿನ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿಯ ಮೇಲ್ಛಾವಣಿ ಕುಸಿದ ಪರಿಣಾಮ, ಪಾಠ ಕೇಳುತ್ತಿದ್ದ ಇಬ್ಬರು ಬಾಲಕರಿಗೆ ಗಾಯವಾಗಿದ್ದು, ಕೂದಲೆಳೆಯ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಿನಾಯಕ ಮೋರೆ ಹಾಗೂ ಮತ್ತೋರ್ವ ಗಾಯಗೊಂಡವರು.
ಐದನೇ ತರಗತಿಯ 25 ವಿದ್ಯಾರ್ಥಿಗಳು ಶಾಲೆಯ ಕೊಠಡಿಯೊಂದರಲ್ಲಿ ಶಿಕ್ಷಕರ ಪಾಠ ಕೇಳುತ್ತಿದ್ದರು. ಈ ವೇಳೆ ಮೇಲ್ಛಾವಣಿಗೆ ಅಳವಡಿಸಿದ್ದ ಕಂಬವೊಂದು ಕಳಚಿ ಬಿದ್ದಿದೆ. ಮೊದಲು ಖಾಲಿ ಜಾಗದಲ್ಲಿ ಬಿದ್ದು ನಂತರ ವಿನಾಯಕ ಹಾಗೂ ಇನ್ನೋರ್ವ ವಿದ್ಯಾರ್ಥಿಯ ಮೇಲೆ ಬಿದ್ದಿದೆ. ಪರಿಣಾಮ ವಿನಾಯಕ ಎಡಕಾಲಿಗೆ ಗಂಭೀರ ಗಾಯವಾಗಿದ್ದು, ಮತ್ತೋರ್ವನಿಗೆ ಸಣ್ಣ ಗಾಯವಾಗಿದೆ. ಕೂಡಲೇ ಮೇವುಂಡಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಕಂಬ ನೇರವಾಗಿ ವಿದ್ಯಾರ್ಥಿಗಳ ಮೇಲೆ ಬಿದ್ದಿಲ್ಲ. ಹೀಗಾಗಿ, ದೊಡ್ಡ ಅನಾಹುತ ತಪ್ಪಿದಂತಾಗಿದೆ.
ನೀರಲಗಿ ಶಾಲೆಯಲ್ಲಿ ಈ ಮುಂಚೆ ಹಂಚಿನ ರೂಮ್ ಇತ್ತು. ಕಳೆದ ವರ್ಷ ಅದನ್ನು ರಿಪೇರಿ ಮಾಡಿಸಿ ತಗಡಿನ ಶೀಟ್ ಅಳವಡಿಸಲಾಗಿತ್ತು. ಒಂದು ಕಟ್ಟಿಗೆಯ ಪಟ್ಟಿ ಹಾಗೆಯೇ ಉಳಿದಿತ್ತು. ಅದು ಕಳಚಿ ಬಿದ್ದಿದೆ. ಸದ್ಯ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಶುಕ್ರವಾರ ನಾನು ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.