ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಿ; ನಾಟ್ಯಾಂಜಲಿ ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ಡಾ.ಸಂದೀಪ ಪಂಡಿತ

16 HVR 8
Published on

ಹಾವೇರಿ: ಭರತನಾಟ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ಹೆತ್ತವರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ಈ ಮೂಲಕ ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯ ಮಾಡಬೇಕು ಎಂದು ಎಂದು ಗೆಳೆಯರ ಬಳಗದ ಅಧ್ಯಕ್ಷ ಡಾ.ಸಂದೀಪ ಪಂಡಿತ ಹೇಳಿದರು.

ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯ ಸಭಾಂಗಣದಲ್ಲಿ ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಹಾವೇರಿ ಶಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ನೃತ್ಯ ಸಂಧ್ಯಾ’ ಭರತನಾಟ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಕೈಗೆ ಪಾಲಕರು ಮೊಬೈಲ್ ನೀಡುವ ಮೂಲಕ ಅವರನ್ನು ಮನೋರೋಗಿಳನ್ನಾಗಿ ಮಾಡುತ್ತಿದ್ದಾರೆ. ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಅವರಿಗೆ ಭರತನಾಟ್ಯ, ನೃತ್ಯ, ಚೆಸ್, ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿ. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಮಾತನಾಡಿ, ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಲ್ಲಿ ಭರತನಾಟ್ಯದ ತರಬೇತಿಯನ್ನು ವಿದುಷಿ ಡಾ.ಸಹನಾ ಭಟ ನೀಡುತ್ತಿದ್ದಾರೆ. ನಮ್ಮ ಕೇಂದ್ರದಲ್ಲಿ ತರಬೇತಿ ಹೊಂದಿರುವ ಹಲವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಭಗಿನಿಯರ ಬಳಗದ ಸದಸ್ಯೆ ಡಾ.ಅಂಜಲಿ ಪಂಡಿತ, ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿದರು. ಡಾ.ಚೈತ್ರಾ ಲಕ್ಷ್ಮೀ ಸ್ವಾಗತಿಸಿದರು. ಮಂಜುಳಾ ಸುಬ್ರಹ್ಮಣ್ಯ ಹಾಗೂ ಅನುಷ್ಕಾ ಶೆಟ್ಟಿ ನಿರೂಪಿಸಿದರು.

ಗುರುವಂದನೆ:

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಪ್ರದೀಪ ಭಟ್ ಹಾಗೂ ನೃತ್ಯ ಗುರು ಡಾ.ಸಹನಾ ಭಟ್ಟ ಅವರಿಗೆ ಕೇಂದ್ರ ಹಳೆಯ ವಿದ್ಯಾರ್ಥಿನಿಯರು ಗುರುವಂದನೆ ಸಲ್ಲಿಸಿದರು.

ಜನಮನ ರಂಜಿಸಿದ ನೃತ್ಯ

ನೃತ್ಯ ಸಂಧ್ಯಾ ಕಾರ್ಯಕ್ರಮದಲ್ಲಿ ನೃತ್ಯ ಗುರು ಸಹನಾ ಭಟ್ಟ ನಿರ್ದೇಶನದಲ್ಲಿ ಪುಟಾಣಿ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಎರಡೂವರೆ ತಾಸು ಭರತನಾಟ್ಯದ ವಿವಿಧ ಪ್ರಕಾರಗಳಲ್ಲಿ ಸೊಗಸಾಗಿ ಅಚ್ಚುಕಟ್ಟಾಗಿ ನೃತ್ಯ ಪ್ರದರ್ಶನ ನೀಡಿದರು.

ಪ್ರಾರಂಭದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿನಿತಯರು ಭರತನಾಟ್ಯದ ನೃತ್ಯ ಬಂಧಗಳಾದ ಆಲಾರಿಪು, ಜತಿಸ್ವರ, ದೇವರನಾಮ, ತಿಲ್ಲಾನ ಪ್ರದರ್ಶನ ಜನರನ್ನು ಆಕರ್ಷಿಸಿತು. ನಂತರದಲ್ಲಿ ಮಹಿಳೆಯರು ಭಾವಗೀತೆಗಳನ್ನು ಸುಂದರವಾಗಿ ಪ್ರದರ್ಶಿಸಿದರು. ಕೊನೆಯಲ್ಲಿ ಕಲಾವಿದರಾದ ಕೃತಿ, ವಿದುಷಿ, ದಿವ್ಯ ಪ್ರದರ್ಶಿಸಿದ ಶಿವಸ್ತುತಿ ‘ಬಾಗಿಲೊಳು ಕೈಮುಗಿದು ಒಳಗೆ ಬಾ’, ‘ಯಾತ್ರಿಕನೆ’, ‘ಶೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ನೃತ್ಯರೂಪಕಗಳು ಅದ್ಭುತವಾಗಿ ಮೂಡಿ ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net