ಪೊಲೀಸರಿಂದ ತಪ್ಪಿಸಿಕೊಂಡ ನಟೋರಿಯಸ್ ಮೌಲಾಲಿ

Published on

ಹಾವೇರಿ: ನೀರು ಕುಡಿಯುವ ಸೋಗಿನಲ್ಲಿ ನಟೋರಿಯಸ್ ಆರೋಪಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಾನಗಲ್ಲ ಇಂದಿರಾ ನಗರ ನಿವಾಸಿ ಮೌಲಾಲಿ ಅಯೂಬ್‌ಸಾಬ ಅತ್ತಾರ (27) ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ. ದರೋಡೆ ಪ್ರಕರಣವೊಂದರ ವಿಚಾರಣೆಗೆಂದು ಬಂಕಾಪುರ ಠಾಣೆ ಪೊಲೀಸರು ಏ.20ರಂದು ಹಾವೇರಿ ನಗರದ ಜಿಲ್ಲಾ ಸೆಶನ್ ನ್ಯಾಯಾಲಯಕ್ಕೆ ಆರೋಪಿಯನ್ನು ಕರೆತಂದಿದ್ದರು. ಈ ವೇಳೆ ನೀರು ಕುಡಿಯುವುದಾಗಿ ಹೇಳಿದ ಮೌಲಾಲಿ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೌಲಾಲಿ ವಿರುದ್ಧ ಜಿಲ್ಲೆ ಸೇರಿದಂತೆ ಇತರ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ಅತ್ಯಾಚಾರ, ಕಳ್ಳತನ ಸೇರಿದಂತೆ ಇತರ ಪ್ರಕರಣಗಳು ದಾಖಲಾಗಿವೆ. ಇಂತಹ ನಟೋರಿಯಸ್ ಆರೋಪಿಯನ್ನು ಕೋರ್ಟ್‌ಗೆ ಕರೆತಂದಾಗ ಪೊಲೀಸರಿಂದ ಭದ್ರತಾ ಲೋಪ ಉಂಟಾಗಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಆರೋಪಿ ಪರಾರಿ ಬೆನ್ನಲ್ಲೇ ಜಿಲ್ಲಾ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಹೆಚ್ಚುವರಿ ಎಸ್‌ಪಿ ಸಿ.ಗೋಪಾಲ ಸೇರಿದಂತೆ ಇತರ ಅಧಿಕಾರಿಗಳ ತಂಡ ಆರೋಪಿಯ ಹಾನಗಲ್ಲ ನಿವಾಸಕ್ಕೆ ತೆರಳಿ ಪರಿಶೀಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net