

ವಿಜಯವಾಣಿ ಸುದ್ದಿಜಾಲ ಹಾವೇರಿ
ಸರ್ವರಲ್ಲೂ ಏಕತೆ, ಭಾವೈಕ್ಯ, ಸೌಹಾರ್ದ, ರಾಷ್ಟ್ರೀಯತೆಯ ಭಾವ ಮೂಡಿಸುವ ಗಣಗಳ ಅಧಿನಾಯಕ ಗಣೇಶ ಹಬ್ಬದ ಸಡಗರ ಜಿಲ್ಲಾದ್ಯಂತ ಮನೆ ಮಾಡಿದ್ದು, ಬುಧವಾರ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಭಕ್ತರು ಪ್ರತಿಷ್ಠಾಪಿಸಿ, ಭಕ್ತಿಭಾವ ಮೆರೆದರು. ‘ಶ್ರೀ ವ್ನಿೇಶ್ವರ ಮಹಾರಾಜ ಕೀ ಜೈ’ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.
ಬುಧವಾರ ಬೆಳಗ್ಗೆ ಕುಟುಂಬಸಮೇತರಾಗಿ ಗಣೇಶ ಮೂರ್ತಿ ತಂದು, ಶಾಸ್ತ್ರೋಕ್ತವಾಗಿ ಪೂಜೆಗೈದರು. ಹೋಳಿಗೆ, ಕಡಬು, ಮೋದಕ, ಲಡ್ಡು, ಕರ್ಚಿಕಾಯಿ, ಚಕ್ಕುಲಿ, ಪಾಯಸ, ಮೊಸರನ್ನ, ಇತ್ಯಾದಿ ಭಕ್ಷೃಗಳನ್ನು ತಯಾರಿಸಿ ಗಣಪನಿಗೆ ನೈವೇದ್ಯ ನೆರವೇರಿಸಿದರು. ಮಕ್ಕಳು ಹಸಿರು ಪಟಾಕಿ ಹಚ್ಚಿ ಸಂತಸಪಟ್ಟರು.
ಜಿಲ್ಲೆಯಲ್ಲಿ 2,227 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಗಣೇಶೋತ್ಸವ ಮಂಡಳಿ ಸದಸ್ಯರು ವಿಶಿಷ್ಟ ಮಾದರಿಯ ಬಗೆ ಬಗೆಯ ಮಂಟಪಗಳನ್ನು ತಯಾರಿಸಿ, ನೂರಾರು ಜನ ಒಟ್ಟಿಗೆ ಸೇರಿ, ವಿವಿಧ ವಾದ್ಯಗಳೊಂದಿಗೆ ತೆರಳಿ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಣಪನ ಪ್ರತಿಷ್ಠಾಪಿಸಿದರು.
ಸರ್ಕಾರಿ ಕಚೇರಿಗಳಲ್ಲಿ: ಜಿಲ್ಲಾ ಕೇಂದ್ರ ಹಾವೇರಿ ಶಹರ, ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು, ಗ್ರಾಮೀಣ ಭಾಗದ ಹಲವು ಸರ್ಕಾರಿ, ಖಾಸಗಿ ಕಚೇರಿಗಳಲ್ಲೂ ಗಣೇಶ ಹಬ್ಬದ ವೈಭವ ಕಂಡುಬಂತು.
ಹಾವೇರಿ ನಗರಸಭೆ ಕಾರ್ಯಾಲಯ, ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮುಖ್ಯ ಕಚೇರಿ, ಹೆಸ್ಕಾಂ ಎಸ್‌ಇ, ಇಇ, ವಾಕರಸಾ ಸಂಸ್ಥೆ ವಿಭಾಗೀಯ ಕಚೇರಿ, ಕೇಂದ್ರೀಯ ಬಸ್ ನಿಲ್ದಾಣ, ವಿವಿಧ ಶಾಲಾ- ಕಾಲೇಜ್‌ಗಳು ಸೇರಿದಂತೆ ಹಲವೆಡೆ ಹಿಂದು, ಮುಸ್ಲಿಂ, ಕ್ರೈಸ್ತರು, ಇತರ ಧರ್ಮೀಯರು ಒಂದಾಗಿ ಗಣೇಶೋತ್ಸವ ಆಚರಿಸುವ ಮೂಲಕ ಭಾವೈಕ್ಯ ಸಾರಿದರು.