ರಾಷ್ಟ್ರೀಯ ಲೋಕ ಅದಾಲತ್ ಸೆ.13ರಂದು

Published on

ಹಾವೇರಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜಿಲ್ಲೆಯಲ್ಲಿ ಸೆ.13ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ.

ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳಾದ ವೈವಾಹಿಕ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು, ಮೋಟರ್ ಅಪಘಾತ ನ್ಯಾಯಾಧೀಕರಣದ ಪ್ರಕರಣಗಳು, ಚೆಕ್ ಅಮಾನ್ಯದ ಪ್ರಕರಣಗಳು, ವಾಣಿಜ್ಯ ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳು, ಸೇವಾ ಪ್ರಕರಣಗಳು, ರಾಜಿ ಆಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕ ವ್ಯಾಜ್ಯ ಪ್ರಕರಣಗಳು ಪಾಲುದಾರಿಕೆ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ತಕ್ಷಣ ಪರಿಹಾರ ಒದಗಿಸುವುದು ರಾಜ್ಯ ಮತ್ತು ಎಲ್ಲ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಸೇವಾ ಸಮಿತಿಯು ಉದ್ದೇಶವನ್ನು ಹೊಂದಿದೆ. ಹೀಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ರಾಷ್ಟೀಯ ಪ್ರಾಧಿಕಾರದ ನಿರ್ದೇಶನದಂತೆ, ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ 90 ದಿನಗಳ ಅಭಿಯಾನವನ್ನು ಅಕ್ಟೋಬರ್ 7ರವರೆಗೂ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಪ್ರಕರಣಗಳನ್ನು ಸಂದಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕ ಉಪಯುಕ್ತ ಸೇವೆಗಳಿಗಾಗಿ ಧಾರವಾಡದಲ್ಲಿ ಖಾಯಂ ಜನತಾ ನ್ಯಾಯಾಲಯವಿದ್ದು, ಇಲ್ಲಿ ಸಾರ್ವಜನಿಕರು ಪೂರ್ವದಾವೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಬಿರಾದಾರ ದೇವಿಂದ್ರಪ್ಪಾ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net