ನರೇಗಾ ಕೂಲಿ ಹಣ ಬಾಕಿ ಬಿಡುಗಡೆಗೆ ಒತ್ತಾಯ; ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಮನವಿ

19 HVR 6
Published on

ಹಾವೇರಿ: ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ಕಾರ್ಮಿಕರ ಕೂಲಿ ಹಣವನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ್) ಒತ್ತಾಯಿಸಿದೆ.
ಗ್ರಾಕೂಸ್ ವತಿಯಿಂದ ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮೀಣ ಭಾಗದ ದುಡಿಯುವ ಜನರ ಅನುಕೂಲಕ್ಕೆಂದು ಜಾರಿಗೆ ತಂದಿರುವ ನರೇಗಾ ಕೂಲಿ ಹಾಗೂ ಹಣ ಪಡೆಯಲು ಹರಸಾಹಸ ಪಡುವಂತಾಗಿದೆ. ಸುಮಾರು 2 ತಿಂಗಳಿನಿಂದ ಕೂಲಿ ಮಾಡಿದ ಕೋಟ್ಯಂತರ ರೂ. ಹಣ ಈವರೆಗೆ ಬಿಡುಗಡೆಯಾಗಿಲ್ಲ. ಇದರಿಂದಾಗಿ ಬಡ ಕುಟುಂಬಗಳು ಜೀವನೋಪಾಯಕ್ಕಾಗಿ ಪಟ್ಟಣದ ದಾರಿ ಹಿಡಿಯುವಂತಾಗಿದೆ.
ಹಾಗಾಗಿ, ಈ ಕೂಡಲೇ ಬಾಕಿ ಕೂಲಿ ಹಣ ಬಿಡುಗಡೆ ಮಾಡಬೇಕು. ಕನಿಷ್ಠ 200 ಮಾನವ ದಿನಗಳನ್ನು ನೀಡಬೇಕು. ದಿನದ ಕೂಲಿಯನ್ನು 600 ರೂ.ಗೆ ಏರಿಸಬೇಕು. ಕೂಲಿ ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ದ ಕುಡಿಯುವ ನೀರು, ಇತ್ಯಾದಿ ಒದಗಿಸಿ ಎಂದು ಒತ್ತಾಯಿಸಿದರು.
ಗ್ರಾಕೂಸ್ ಜಿಲ್ಲಾಧ್ಯಕ್ಷ ರಾಜಣ್ಣ ಆಲದಹಳ್ಳಿ, ಉಪಾಧ್ಯಕ್ಷ ರಮೇಶ ಕಟ್ಟಿಮನಿ, ಹನುಮಂತ ಕಳ್ಳಿಮನಿ, ಕುಬೇರಪ್ಪ ಎಚ್.ವಿ., ಗಣೇಶಪ್ಪ ನಾಗನಗೌಡ್ರ, ಎಂ.ಜಿಕಳ್ಳಿಮನಿ, ಪಾರ್ವತಿ ಈಳಗೇರ, ರಂಜಿತಾ ಅಂಚಿ, ಲಲಿತಾ ಹರಿಜನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net