‘ಹಾಲನಕೆರೆ’ಗೆ ಸೇರುತ್ತಿದೆ ‘ವಿಷ’ !; ನಾಗೇಂದ್ರನಮಟ್ಟಿ ಭಾಗದ ಜಲಮೂಲ ಕಲುಷಿತ

16 HVR 2 A
Published on

ಕೇಶವಮೂರ್ತಿ ವಿಬಿ. ಹಾವೇರಿ

ನಾಗೇಂದ್ರನಮಟ್ಟಿಯ ಮೂರನೇ ವಾರ್ಡ್ ವ್ಯಾಪ್ತಿಯ ಹಾಲನಕೆರೆಗೆ ದಿನನಿತ್ಯವೂ ವಿಷ ಸೇರುತ್ತಿದೆ. ಚರಂಡಿ ನೀರು ಜತೆಗೆ ಕಸ, ತ್ಯಾಜ್ಯ ಕೆರೆಗೆ ಸೇರುತ್ತಿದ್ದರೂ ಹಾವೇರಿ ನಗರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಸುಮಾರು 10 ಸಾವಿರಕ್ಕೂ ಅಧಿಕ ಮನೆಗಳನ್ನು ಹೊಂದಿರುವ ನಾಗೇಂದ್ರನಮಟ್ಟಿ ಭಾಗದ ಈ ಜಲಮೂಲ ಕಲುಷಿತಗೊಂಡಿದ್ದು, ಇಲ್ಲಿನ ಜನಚರ ಸೇರಿದಂತೆ ಸುತ್ತಮುತ್ತಲಿನ ಜನರಲ್ಲಿ ರೋಗಭೀತಿ ಆವರಿಸಿದೆ. ಕೆರೆಯ ಸುತ್ತ ಗಿಡ ಕಂಟಿ ಬೆಳೆದಿದ್ದು, ದುರ್ನಾತ ಬೀರುತ್ತಿದೆ. ಕೆಲವರು ಮಾಂಸ ತ್ಯಾಜ್ಯ ಎಸೆಯುತ್ತಿದ್ದಾರೆ. ಈ ಕೆರೆಯಿಂದ ಸುತ್ತಮುತ್ತಲಿನ ಹಲವು ಬೋರ್‌ವೆಲ್‌ಗಳಿಗೆ ಜೀವ ಬಂದಿದೆ. ಸುತ್ತಮುತ್ತ ಅಂತರ್ಜಲದ ಮಟ್ಟ ಚೆನ್ನಾಗಿದೆ. ಹೀಗಿದ್ದರೂ ಕೆರೆಯ ಬಗೆಗಿನ ದಿವ್ಯ ನಿರ್ಲಕ್ಷೃಕ್ಕೆ ಜನ ಬೇಸತ್ತಿದ್ದಾರೆ.

ನಿತ್ಯವೂ ಕಸದ ವಾಹನ ಸಂಚರಿಸದ ಕಾರಣ ಕೆರೆಗೆ ದಿನನಿತ್ಯ ಜನ ಕಸ, ತ್ಯಾಜ್ಯ ಚೆಲ್ಲುತ್ತಿದ್ದಾರೆ. ಬಟ್ಟೆ ಒಗೆದ ನೀರು, ಮುಸುರಿ ನೀರು ಕೆರೆಯ ನೀರಿನೊಂದಿಗೆ ಮಿಶ್ರಣವಾಗುತ್ತಿದೆ. ಕೆರೆಯಲ್ಲಿ ದನ- ಕರುಗಳಿಗೆ ಸ್ನಾನ, ಬೈಕ್, ಕಾರು, ಟಂಟಂಗಳ ಸ್ವಚ್ಛತಾ ಕಾರ್ಯಕ್ಕೆ ಅಡೆತಡೆ ಇಲ್ಲದಾಗಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಈ ಭಾಗದ ಚರಂಡಿ ನೀರು ಸಲೀಲಾಗಿ ಹರಿದುಬಂದು ಕೆರೆಗೆ ನುಗ್ಗುತ್ತದೆ.

ನಗರಸಭೆಯಾಗಲೀ, ಸದಸ್ಯರಾಗಲೀ ಯಾರೂ ಈ ಕೆರೆಯ ಬಗ್ಗೆ ಕಾಳಜಿ ತೋರುತ್ತಿಲ್ಲ. ಕೆಲ ವರ್ಷಗಳ ಹಿಂದೆ ನೆಹರು ಓಲೇಕಾರ ಹಾಗೂ ರುದ್ರಪ್ಪ ಲಮಾಣಿ ಅವರು ಶಾಸಕರಿದ್ದಾಗ ಎರಡು ಸಲ ಲಕ್ಷಾಂತರ ರೂ.ಯನ್ನು ಈ ಕೆರೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದರು. ಆದರೂ ಕೆರೆ ಅಭಿವೃದ್ಧಿ ಕಾಣಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ಆಡಳಿ ನಗರಸಭೆ ಹಾಗೂ ಶಾಸಕರು ಹಾಲನಕೆರೆಯ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ಕೆರೆಗೆ ಸೇರುವ ವಿಷಕ್ಕೆ ಬ್ರೇಕ್ ಹಾಕುವ ಮೂಲಕ ಹೆಸರಿಗೆ ತಕ್ಕಂತೆ ಹಾಲನಕರೆ ಆಗುವಂತೆ ನೋಡಿಕೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಶೌಚಕ್ಕಿಲ್ಲ ಅಡೆತಡೆ

ಕೆರೆಯ ಆವರಣದಲ್ಲಿ ಕೆಲವರು ಶೌಚ ಮಾಡಿ ಗಲೀಜು ಮಾಡುತ್ತಿದ್ದಾರೆ. ಈ ಭಾಗದಲ್ಲಿ ಹಲವು ಮನೆಗಳಲ್ಲಿ ಶೌಚಗೃಹಗಳೇ ಇಲ್ಲ. ಇದ್ದ ಕೆಲವರೂ ಇಲ್ಲಿಗೆ ಬರುತ್ತಾರೆ. ಇತ್ತೀಚೆಗೆ ಶೌಚಗೃಹಕ್ಕೆಂದು ಕೆರೆಯ ಬಳಿ ಬಂದಿದ್ದ ವ್ಯಕ್ತಿಯೊಬ್ಬ ಕಾಲುಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಸಂಬಂಧಪಟ್ಟವರು ಕೆರೆ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸ್ಥಳೀಯರಾದ ಶಾಂತಯ್ಯ ಮಳಿಮಠ ಒತ್ತಾಯಿಸಿದ್ದಾರೆ.

ಒತ್ತುವರಿಯದ್ದೇ ವರಿ

ಕೆರೆ ಒಟ್ಟು 5 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಆದರೆ, ಈ ಕರೆಯ ಸುತ್ತ ಕೆಲವೆಡೆ ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸುವಮತೆ ಸ್ಥಳೀಯರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಬೇಕಿದೆ.

ಕೋಟ್:  

ಹಾಲನಕೆರೆ ಅಭಿವೃದ್ಧಿಗಾಗಿ ಲಕ್ಷಾಂತರ ರೂ. ಬಿಡುಗಡೆಯಾದರೂ ಯಾರೂ ಇದನ್ನು ಅಭಿವೃದ್ಧಿ ಪಡಿಸಿಲ್ಲ. ಈ ಕೆರೆ ಅಭಿವೃದ್ಧಿ ಪಡಿಸಿದರೆ ಸಾವಿರಾರು ಜನರಿಗೆ ಅನುಕೂಲ ಆಗುತ್ತದೆ. ಪರಿಸರವೂ ಸುಂದರವಾಗುತ್ತದೆ. ಈ ಕೆರೆಯ ಸಮಗ್ರ ಅಭಿವೃದ್ಧಿಪಡಿಸಿ, ಸುತ್ತಲೂ ವಾಕಿಂಗ್ ಮಾಡಲು ಪೇವರ್ಸ್‌ ಅಳವಡಿಸಿ, ಉದ್ಯಾನವನ ನಿರ್ಮಿಸಬೇಕು.

> ಹುಸೇನ್‌ಖಾನ್ ಪಠಾಣ, ಸ್ಥಳೀಯ ನಿವಾಸಿ

ಕೋಟ್:  

ಹಾಲನಕೆರೆಯ ಅಭಿವೃದ್ಧಿ ಕುರಿತು ನಗರಸಭೆ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರ ಗಮನಕ್ಕೆ ತಂದಿದ್ದೇನೆ. ಬೆಳಗಾವಿ ಅಧಿವೇಶನದ ಬಳಿಕ ಅನುದಾನ ಲಭ್ಯವಾಗುತ್ತದೆ. ನಂತರ ಕೆರೆಗೆ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ.

> ರವಿ ದೊಡ್ಡಮನಿ, 3ನೇ ವಾರ್ಡ್ ಸದಸ್ಯ, ಹಾವೇರಿ ನಗರಸಭೆ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net