ಅಶ್ವಿನಿ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ; ಕೊನೆಗೂ ಎಚ್ಚೆತ್ತ ಹಾವೇರಿ ನಗರಸಭೆ

Ashwini Nagara Kasa Impact
Published on

ಹಾವೇರಿ: ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಪ್ರತಿಷ್ಠಿತ ಬಡಾವಣೆ ಅಶ್ವಿನಿ ನಗರದ ಕಸದ ಸಮಸ್ಯೆಗೆ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ನಗರಸಭೆಯ ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಜನರಲ್ಲಿ ನೆಮ್ಮದಿ ಭರವಸೆ ಮೂಡಿಸಿದೆ. ಅಶ್ವಿನಿ ನಗರದಲ್ಲಿ ಕಳೆದ ಹಲವು ದಿನಗಳಿಂದ ಸ್ವಚ್ಛತಾ ಕಾರ್ಯವೇ ನಡೆದಿರಲಿಲ್ಲ. ಇದರಿಂದಾಗಿ ರಸ್ತೆಬದಿ, ಚರಂಡಿ ಅಕ್ಕಪಕ್ಕ ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿತ್ತು. ಹಂದಿ, ನಾಯಿಗಳು ಕಸವನ್ನು ಎಳೆದು ತಂದು ರಸ್ತೆ ಮೇಲೆ, ಮನೆಯ ಅಂಗಳದ ಮೇಲೆ ಹಾಕುತ್ತಿದ್ದವು. ಚರಂಡಿಯಲ್ಲಿ ಕಸ ತುಂಬಿ ನೀರು ಹರಿಯದಂತಾಗಿತ್ತು. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ಜನರಲ್ಲಿ ರೋಗ ಭೀತಿ ಶುರುವಾಗಿತ್ತು.
ಸತತವಾಗಿ ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ಬಡಾವಣೆಯಲ್ಲಿನ ಚರಂಡಿಗಳಲ್ಲಿನ ಹೂಳು ತೆಗೆಯುತ್ತಿದ್ದಾರೆ. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿ ತೆರವುಗೊಳಿಸುತ್ತಿದ್ದಾರೆ. ನೂತನ ಸಾಯಿ ಬಾಬಾ ದೇಗುಲದ ಬಳಿ ರಾಜಕಾಲುವೆ ಸ್ವಚ್ಛಗೊಳಿಸುತ್ತಿದ್ದಾರೆ. ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸ ತೆರವುಗೊಳಿಸುತ್ತಿದ್ದಾರೆ. ಇನ್ನೂ ಹಲವೆಡೆ ಕಸದ ರಾಶಿ ಇದ್ದು, ಸ್ವಚ್ಛತಾ ಕಾರ್ಯ ಮುಂದುವರಿದಿದೆ.
ಈ ಕುರಿತು ‘ಕಸದ ರಾಶಿ.. ಜನರಿಗೆ ರೋಗ ಭೀತಿ’ ಶೀರ್ಷಿಕೆಯಡಿ ‘ವಿಜಯವಾಣಿ’ ೆ.23ರಂದು ವರದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net