ಪ್ರಥಮ ಪ್ರಜೆಗೆ ಅಗೌರವ ಆರೋಪ; ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಬೇಸರ

7 Shashikala malagi
Published on

ಹಾವೇರಿ: ನಗರದಲ್ಲಿ ಜ.5ರಂದು ನಗರದಲ್ಲಿ ಆಯೋಜಿಸಿದ್ದ 50 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ತಮ್ಮನ್ನು ಸ್ವಾಗತಿಸದೇ ನಗರಸಭೆ ಅಧಿಕಾರಿಗಳು ಪ್ರಥಮ ಪ್ರಜೆಗೆ ಅಗೌರವ ತೋರಿದ್ದಾರೆ ಎಂದು ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ನನಗೆ ಗೌರವವಿದೆ. ನಗರಸಭೆಯ ಯೋಜನೆಗಳನ್ನು ಉದ್ಘಾಟಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಬಂದಿಲ್ಲ. ಕಾರ್ಯಕ್ರಮದ ಹಿಂದಿನ ದಿನ ಕಾಟಾಚಾರಕ್ಕೆ ಮಾಹಿತಿ ತಿಳಿಸಿದ್ದು, ಮಹಿಳಾ ಅಧ್ಯಕ್ಷೆ ಎಂಬ ಕಾರಣಕ್ಕೆ ಈ ರೀತಿ ಅಗೌರವ ತೋರುವ ಕೆಲಸ ನಡೆದಿದೆ. ಹಾಗಾಗಿ, ಗೈರಾಗಿದ್ದೆ. ಹೀಗಾಗಿ, ನಗರಸಭೆ ಎಇಇ ಎನ್.ಆರ್.ರಾಯ್ಕರ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದೇನೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ ಹೊಸಗೌಡ್ರ ಅವರು ಹಾವೇರಿ ನಗರಸಭೆ ಆಡಳಿತ ಮಂಡಳಿ ಇದ್ದರೂ ಕೂಡ ಅಧ್ಯಕ್ಷರ ಗಮನಕ್ಕೆ ತರದೇ ನಾಲ್ಕೈದು ಬಾರಿ ಸಭೆ ನಡೆಸಿದ್ದಾರೆ. ಸೌಜನ್ಯಕ್ಕಾದರೂ ಅಧ್ಯಕ್ಷರು, ಸದಸ್ಯರನ್ನು ಸಭೆಗೆ ಆಹ್ವಾನಿಸದೇ ಕೇವಲ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು ಶಶಿಕಲಾ ಮಾಳಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net