

ಹಾವೇರಿ: ನಾಗರ ಪಂಚಮಿ ಹಬ್ಬದ ಅಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಹೊಳಿ ಗಂಗವ್ವನ ಪೂಜೆ ವಿಶೇಷವಾಗಿ ನೆರವೇರಿತು. ನದಿ, ಕೆರೆ, ಬೋರ್‌ವೆಲ್‌ಗಳಿಗೆ ಮಹಿಳೆಯರು ಪೂಜೆ ಸಲ್ಲಿಸಿ, ನೈವೇದ್ಯ ಹಿಡಿದು ಪ್ರಾರ್ಥನೆ ಸಲ್ಲಿಸಿದರು.
ಹೊಳೆ, ಕೆರೆ ದಂಡೆಗಳಿಗೆ ತೆರಳಿದ ಮಹಿಳೆಯರು ಗಂಗಾದೇವಿಗೆ ಕಡುಬು, ಉಂಡೆ, ಎಡೆ ಹಿಡಿದು, ಮಂಗಳಾರತಿ ಬೆಳಗಿ ಬಾಗೀನ ಅರ್ಪಿಸಿದರು. ಹಲವು ಮಹಿಳೆಯರು ಮನೆ, ಹೊಲದ ಬೋರ್‌ವೆಲ್‌ಗಳು ಹಾಗೂ ಯಂತ್ರಗಳನ್ನು ಸ್ವಚ್ಛಗೊಳಿಸಿ, ಸೀರೆಯುಡಿಸಿ, ಮಾಲೆ ಹಾಕಿ, ಆರತಿ ಮಾಡಿ ಪೂಜೆ ಸಲ್ಲಿಸಿದರು.
ಹಲವು ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ನಾಗದೇವರಿಗೆ ಹಾಲೆರೆದು, ಪೂಜೆ ಸಲ್ಲಿಸಿದರು. ಹಲವರು ಮನೆಗಳಲ್ಲಿ ಮಣ್ಣಿನ ಹಾಗೂ ಬೆಳ್ಳಿ-ಬಂಗಾರದ ನಾಗ ಮೂರ್ತಿ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಹಾಲೆರೆದರು. ತಂಬಿಟ್ಟಿನ ಉಂಡಿ, ಕಡಲೆ ಉಂಡಿ, ಶೇಂಗಾ ಉಂಡಿ, ಅಂಟಿನ ಉಂಡಿ, ಎಳ್ಳು ಉಂಡಿ, ಜೋಳದ ಅರಳು, ನೆನೆಸಿದ ಕಡಲೆ ಮೊದಲಾದ ಖಾದ್ಯಗಳನ್ನು ನೇವೈದ್ಯ ಮಾಡಿದರು.
ಮಕ್ಕಳು ಸೇರಿದಂತೆ ಕುಟುಂಬದವರೆಲ್ಲ ಹೋಳಿಗೆ, ಕಡುಬು, ತರಹೇವಾರಿ ಉಂಡಿ ಸವಿದರು. ಜೋಕಾಲಿ ಜೀಕಿ ಸಂಭ್ರಮಪಟ್ಟರು. ಗ್ರಾಮೀಣ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಗೆ ಜೋಕಾಲಿ ಕಟ್ಟಿ ಆಟವಾಡಿ ಖುಷಿ ಪಟ್ಟರು. ಕೆಲವೆಡೆ ಗ್ರಾಮೀಣ ಶಕ್ತಿಪ್ರದರ್ಶನ ಕ್ರೀಡೆಗಳ ಮೂಲಕ ಯುವಕರು ಗಮನಸೆಳೆದರು.