

ಹಾವೇರಿ: ತಾಲೂಕಿನ ನಾಗನೂರ ಗ್ರಾಮದ ಗ್ರಾಮದೇವಿ ಜಾತ್ರೆ ಹಿನ್ನೆಲೆಯಲ್ಲಿ ದ್ಯಾಮವ್ವ ದೇವಿಯ ಮೂರ್ತಿಯನ್ನು ಮಂಗಳವಾರ ಶಿಗ್ಗಾಂವಿ ತಾಲೂಕಿನ ಕುಂದೂರು ಗ್ರಾಮದಿಂದ ಪಾದಯಾತ್ರೆ ಮೂಲಕ ವಿಶೇಷವಾಗಿ ಕರೆತರಲಾಯಿತು.
ಯುಗಾದಿ ಹಬ್ಬದ ಸಂದರ್ಭದಲ್ಲಿ ದೇವಿಯ ಜಾತ್ರೆ ಆಚರಿಸುವ ಹಿನ್ನೆಲೆಯಲ್ಲಿ ಗ್ರಾಮದ ಭಕ್ತರು ಕುಂದೂರಿನಿದ 20 ಕಿ.ಮೀ. ದೂರದಿಂದ ಪಾದಯಾತ್ರೆ ಮೂಲಕ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತರುವ ವಾಡಿಕೆ ಇದೆ. ನೂರಾರು ವರ್ಷಗಳಿಂದ ಮೂರು ವರ್ಷಗಳಿಗೊಮ್ಮೆ ಈ ಪದ್ಧತಿ ನಡೆದುಕೊಂಡು ಬಂದಿದೆ.
ಈ ಬಾರಿಯೂ ಭಕ್ತರು ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ರಸ್ತೆ, ಹೊಲ, ಹಳ್ಳ, ಕೊಳ್ಳಗಳನ್ನು ದಾಟಿ, ನಾಗನೂರ ಬಳಿ ವರದಾ ನದಿಯಲ್ಲಿ ತೆಪ್ಪದ ಮೇಲೆ ಪಲ್ಲಕ್ಕಿ ಇಟ್ಟುಕೊಂಡು ದೇವಿಯನ್ನು ಗ್ರಾಮಕ್ಕೆ ತಂದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದನ, ಭಜನೆ, ಜಾಂಜ್ ಮೇಳದೊಂದಿಗೆ ಮೆರವಣಿಗೆ ನಡೆಸಿ, ದೇವಸ್ಥಾನದಲ್ಲಿ ಪೂಜೆ ಮಾಡಿ, ಉಡಿ ತುಂಬುವ ಕಾರ್ಯ ನಡೆಸಲಾಯಿತು.