

ಹಾವೇರಿ: ತಾಲೂಕಿನ ನಾಗನೂರ ಗ್ರಾಮ ವರದಾ ನದಿ ಪ್ರವಾಹದಿಂದ ಈ ಭಾರಿಯೂ ಗ್ರಾಮದ ಬಹುತೇಕ ಮನೆಗಳು ಮುಳುಗುವ ಆತಂಕ ಮನೆ ಮಾಡಿದ್ದು, ಗ್ರಾಮವನ್ನೇ ಶಾಶ್ವತವಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜು.25ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪದೇಪದೆ ಪ್ರವಾಹ ಹಿನ್ನೆಲೆಯಲ್ಲಿ ನಾಗನೂರ ಗ್ರಾಮ ಸಂಕಷ್ಟಕ್ಕೀಡಾಗುತ್ತಿದೆ. ಹಾಗಾಗಿ, ಗ್ರಾಮವನ್ನು ಸ್ಥಳಾಂತರಿಸುವ ಕುರಿತು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದ್ದರು. ಸಿಎಂ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಗ್ರಾಮಕ್ಕೆ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮುಳುಗಡೆಯಾಗುವ ಪ್ರದೇಶವನ್ನು ಕೂಲಂಕಶವಾಗಿ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಸಮಸ್ಯೆ ಕುರಿತು ಸವಿಸ್ತಾರವಾಗಿ ಚರ್ಚಿಸಿದರು. ಗ್ರಾಮದಲ್ಲಿ ಒಟ್ಟು 520 ಮನೆಗಳು ಇದ್ದು, ಇದರಲ್ಲಿ ಹಳೇ ಗ್ರಾಮದ 150ರಿಂದ 280 ಮನೆಗಳು ಪ್ರವಾಹ ಸಮಸ್ಯೆ ಎದುರಿಸುತ್ತಿವೆ. ಪ್ರತಿ ವರ್ಷ ಮಳೆ ಪ್ರವಾಹ ಹೆಚ್ಚಾದಾಗ ಮುಳುಗಡೆ ಭೀತಿ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮ ಸ್ಥಳಾಂತರಕ್ಕೆ ಜಮೀನು ನೀಡಲು ಒಬ್ಬರು ಮುಂದೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು. ಗ್ರಾಮ ಸ್ಥಳಾಂತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಗ್ರಾಮಸ್ಥರಿಗೆ ಭರವಸೆ ನೀಡಿದರು. ತಹಸೀಲ್ದಾರ್ ಗಿರೀಶ ಸ್ವಾದಿ, ಗ್ರಾಮ ಪಂಚಾಯಿತಿ ಪಿಡಿಒ ಶಿಲ್ಪಾ ಮುದ್ದಿ, ಗ್ರಾಮ ಲೆಕ್ಕಾಧಿಕಾರಿ ಕೃಷ್ಣಾ ವಾಲೀಕಾರ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರಗೌಡ ಪಾಟೀಲ, ಸದಸ್ಯರಾದ ಸಂಗಮೇಶ ಪರಶೆಟ್ಟಿ, ಮಂಜಪ್ಪ ಹಿರೇಗೌಡ್ರ, ಗ್ರಾಮಸ್ಥರಾದ ಹೊಳೆಯಪ್ಪ ಸಿಂಗಾಪುರ, ಮಂಜಪ್ಪ ಮರಿದೇವಣ್ಣವರ, ಹನುಮಂತಗೌಡ ಕಟ್ಟೇಗೌಡರ, ಇತರರಿದ್ದರು. ಬಾಕ್ಸ್ ಪುನರ್ವಸತಿ ವ್ಯವಸ್ಥೆ 2019ರಲ್ಲಿ ವರದಾ ನದಿ ಪ್ರವಾಹದಿಂದ 150 ಮನೆಗಳಿಗೆ ನೀರು ನುಗ್ಗಿತ್ತು. ಈ 150 ಮನೆಗಳನ್ನು ಸ್ಥಳಾಂತರಿಸುವುದು ಅಗತ್ಯವಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಾತ್ಕಾಲಿಕವಾಗಿ 50 ಮನೆಗಳ ಸದಸ್ಯರಿಗೆ ನಾಳೆಯಿಂದಲೇ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು. ರಾತ್ರಿ ವೇಳೆ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು.
ನಿಮ್ಮ ಸರ್ಕಾರಕ್ಕೆ ಕೊಡಿ
ಹಿಂದಿನ ಸರ್ಕಾರ ಗ್ರಾಮವನ್ನು ಸ್ಥಳಾಂತರಕ್ಕೆ ಚಿಂತಿಸಿದರೂ ಸಫಲವಾಗಲಿಲ್ಲ. ಈ ಬಾರಿ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಸರ್ಕಾರ ಬೇರೆಡೆ ಜಾಗ ನೀಡಿದರೆ, ಗ್ರಾಮಸ್ಥರು ಇಲ್ಲಿನ ಜಾಗವನ್ನು ಸರ್ಕಾರಕ್ಕೆ ಬರೆದುಕೊಟ್ಟು ಸಂಪೂರ್ಣವಾಗಿ ಸ್ಥಳಾಂತರಗೊಳ್ಳಬೇಕು. ಟಾಟಾ ಕಂಪನಿ ಮಣ್ಣೂರ ಗ್ರಾಮ ಸ್ಥಳಾಂತರಕ್ಕೆ ಸಹಾಯ ನೀಡಿದಂತೆ ಯಾವುದಾದರೂ ಕಂಪನಿ ಮುಂದೆ ಬಂದರೆ ಮನೆ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಶಾಸಕ ಬಸವರಾಜ ಶಿವಣ್ಣವರ ತಿಳಿಸಿದರು.
ಬಾಂದಾರ ಮುಳುಗಡೆ, ಬೆಳೆ ಹಾನಿ
ಹಾವೇರಿ ತಾಲೂಕು ನಾಗನೂರ ಗ್ರಾಮ ಹಾಗೂ ಹಾನಗಲ್ಲ ತಾಲೂಕು ಕೂಡಲ ಗ್ರಾಮ ಸಂಪರ್ಕಿಸುವ ವರದಾ ನದಿಯ ಬಾಂದಾರ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಎರಡೂ ತಾಲೂಕುಗಳ ಸಂಪರ್ಕಕೊಂಡಿ ಕಳಚಿದಂತಾಗಿದೆ. 30 ಕಿ.ಮೀ. ಸುತ್ತುವರೆದು ಓಡಾಡುಂವಾಗಿದೆ. ಪ್ರವಾಹದಿಂದ ನದಿ ಪಾತ್ರದಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಅಡಕೆ, ಮತ್ತಿತರ ಬೆಳೆ ಹಾಳಾಗುತ್ತಿದೆ. ವರದಾ ನದಿ ನೀರಿನ ಹರಿವು ಹೆಚ್ಚಾದರೆ ಗ್ರಾಮಕ್ಕೆ ನುಗ್ಗಲಿದೆ ಎಂದು ಗ್ರಾಮಸ್ಥ ನಾಗೇಶ ಬಾರ್ಕಿ ತಿಳಿಸಿದ್ದಾರೆ.