

ಹಾವೇರಿ: ತಾಲೂಕಿನ ನಾಗನೂರು ಗ್ರಾಮದಲ್ಲಿ ಸೋಮವಾರ ಗೌರಿ ಹುಣ್ಣಿಮೆಯಂದು ಗ್ರಾಮದ ದ್ಯಾಮವ್ವ ದೇವಿಯ ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕೂಡಲದ ಶ್ರೀ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ ನೆರವೇರಿಸಿದರು. ಇದಕ್ಕೂ ಮೊದಲು ದ್ಯಾಮವ್ವ ದೇವಿಯ ನೂತನ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಆರ್ಕೆಸ್ಟ್ರಾ, ಜಾಂಜ್ ಮೇಳ, ಡೊಳ್ಳು ಕುಣಿತ, ಭಜನೆ, ಇತರ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸಿ ನಂತರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಗ್ರಾಮದ ಮಹಿಳೆಯರ ಕುಂಭ ಹೊತ್ತು ಸಾಗಿದರು. ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.