ಹೊಳಿ ಗಂಗವ್ವನ ಪೂಜೆಗೈದ ಮುತ್ತೈದೆಯರು; ನಾಗಪ್ಪನಿಗೆ ಹಾಲೆರೆದು ಸಂಭ್ರಮ

Kanavalli
Published on

ಹಾವೇರಿ: ನಾಗರ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮೊದಲ ದಿನ ಭಾನುವಾರ ಕಲ್ಲು ನಾಗರಕ್ಕೆ ಹಾಲು ಎರೆದಿದ್ದ ಜನತೆ ಸೋಮವಾರ ನಾಗ ಪಂಚಮಿ ನಿಮಿತ್ತ ಹುತ್ತದಿಂದ ನಿರ್ಮಿಸಿದ ನಾಗಪ್ಪನಿಗೆ ಕಾಯಿ ಹಾಲು ಎರೆದು ನಾಗದೇವನನ್ನು ಪ್ರಾರ್ಥಿಸಿದರು. ನಂತರ ಬೋರ್‌ವೆಲ್, ಕೆರೆ, ನದಿ ದಂಡೆಗೆ ತೆರಳಿ ಹೊಳಿ ಗಂಗವ್ವನಿಗೆ ವಿಶೇಷ ಪೂಜೆಗೈದು ಹಬ್ಬ ಆಚರಿಸಿದರು.
ಬೆಳ್ಳಂಬೆಳಗ್ಗೆ ಮುತ್ತೈದೆಯರು ಮನೆಯಂಗಳ ಸಾರಿಸಿ, ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಿದ್ದರು. ಹುತ್ತದ ಮಣ್ಣಿನಿಂದ ತಯಾರಿಸಿದ ನಾಗಪ್ಪ ಮೂರ್ತಿ ತಂದು ಕುಂಬಳ ಎಲೆಯಲ್ಲಿ ಇಟ್ಟು ಪೂಜೆಗೈದರು. ಅದಕ್ಕೆ ಕಾಯಿ ಹಾಲು, ಬೆಲ್ಲದ ಹಾಲು ಎರೆದು ಪ್ರಾರ್ಥಿಸಿದರು.
ಮನೆ, ಹೊಲದಲ್ಲಿರುವ ಬೋರ್‌ವೆಲ್, ಕೆರೆ, ನದಿ ದಂಡೆಯಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ, ಅದಕ್ಕೆ ಸೀರೆಯುಡಿಸಿ, ಉಡಿ ತುಂಬಿ, ಆರತಿ ಎತ್ತಿದರು. ಉತ್ತಮ ಮಳೆ, ಬೆಳೆ ಬರುವಂತೆ ಮಾಡು ಎಂದು ಗಂಗೆಯನ್ನು ಬೇಡಿಕೊಂಡರು.
ನಾಗರ ಪಂಚಮಿ ಎಂದರೆ ಜೋಕಾಲಿ, ಕೊಬ್ಬರಿ ಬಟ್ಟಲು ಆಟ ಸಾಮಾನ್ಯ. ಜಿಲ್ಲೆಯ ಹಲವೆಡೆ ಇಂತಹ ದೃಶ್ಯ ಕಂಡು ಬಂತು.
ಕರಿಗಡುಬು ಭೋಜನ :
ಹಬ್ಬದ ಅಂಗವಾಗಿ ಹೋಳಿಗೆ, ಕುಚಗಡಬು, ಕರಿಗಡುಬು, ಉಂಡಿ, ಕೋಸಂಬರಿ, ಅನ್ನ, ಸಾಂಬಾರು ನಾಗಪ್ಪನಿಗೆ ನೈವೇದ್ಯ ಹಿಡಿದರು. ನಂತರ ಮಕ್ಕಳೊಂದಿಗೆ ತಾವೂ ಸೇವಿಸಿದರು. ಕೆಲ ಭಕ್ತರು ದೇಗುಲಗಳಿಗೆ ತೆರಳಿ ಪ್ರಾರ್ಥಿಸಿದರು.

ಕೋಟ್:
ನಾಗರ ಪಂಚಮಿ ಅಂಗವಾಗಿ ಸೋಮವಾರ ಐದು ವಿಧದ ಕಾಳುಗಳ ಮೊಳಕೆಯೊಡೆಸಿ ಹೊಳಿ ಗಂಗವ್ವನ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಇದು ರೈತರ ಹಬ್ಬವಾದ್ದರಿಂದ ಮಳೆ, ಬೆಳೆ ಉತ್ತಮವಾಗಿರಲೆಂದು ಗಂಗೆಯನ್ನು ಪ್ರಾರ್ಥಿಸಲಾಯಿತು.
ಸಂಪತ್ತುಕುಮಾರಿ, ವಿದ್ಯಾನಗರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net