ಹಾವೇರಿ: ನಗರದ ಗೆಳೆಯರ ಬಳಗದ ಲೋಡಾಯಾ ಸಭಾ ಭವನದಲ್ಲಿ ನಾಡಹಬ್ಬ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ 28ನೇ ನಾಡಹಬ್ಬ ಉತ್ಸವ ಸೆ.27 ಹಾಗೂ 28ರಂದು ಜರುಗಲಿದೆ.
ಸೆ.27ರಂದು ಸಂಜೆ 6 ಗಂಟೆಗೆ ನಾಡಹಬ್ಬ ಉತ್ಸವವನ್ನು ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಉದ್ಘಾಟಿಸುವರು. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಡಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ನಿಜಲಿಂಗಪ್ಪ ಕಾಳೆ ಅಧ್ಯಕ್ಷತೆ ವಹಿಸುವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುವರು. ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಉಪನ್ಯಾಸ ನೀಡುವರು. ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಸೆ.28ರಂದು ಸಂಜೆ 6 ಗಂಟೆಗೆ ನಡೆಯಲಿರುವ ನಾಡಹಬ್ಬ ಉತ್ಸವದಲ್ಲಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಹರಸೂರು ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಂಸ್ಕೃತಿಗೆ ನಾಡಹಬ್ಬದ ಕೊಡುಗೆ ಕುರಿತು ರೂಪಾ ಸಜ್ಜನ ಉಪನ್ಯಾಸ ನೀಡುವರು. ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.