ಹಾವೇರಿಯಲ್ಲಿ ಬೂದು ತಲೆಯ ‘ಮೈನಾ’ ಚಿಲಿಪಿಲಿ

7 Myna Bird 1
????????????????????????????????????
Published on

ಹಾವೇರಿ: ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿರುವ ಆಲದಮರ ಚಿಕ್ಕ-ಚಿಕ್ಕ ಗಾತ್ರದ ಕೆಂಪುಹಣ್ಣುಗಳ ಗೊಂಚಲಗಳಿಂದ ಕಂಗೊಳಿಸುತ್ತಿದ್ದು, ಸಣ್ಣ-ಪುಟ್ಟ ಪಕ್ಷಿಗಳಿಂದ ಹಿಡಿದು ದೊಡ್ಡಗಾತ್ರದ ಬೂದು ಬಣ್ಣದ ಮಂಗಟ್ಟೆ, ಕಬ್ಬಕ್ಕಿಗಳು, ಗುಬ್ಬಚ್ಚಿಗಳು ಆಲಮರದ ಹಣ್ಣುಗಳ ಗೊಂಚಲಗಳಲ್ಲಿ ಮಾಗಿದ ಹಣ್ಣುಗಳನ್ನು ಹುಡುಕಾಡಿ ಮೆಲ್ಲುತ್ತಿವೆ. ಹಕ್ಕಿಗಳ ಕಲರವ ಹೊಸಗಾನ ಲೋಕವನ್ನೇ ಸೃಷ್ಟಿಸಿದಂತಿದೆ.
ಇದರಲ್ಲಿ ಬೂದು ತಲೆಯ ಮೈನಾ (ಗ್ರೇ-ಹೆಡೆಡ್ ಸ್ಟಾರ್ಲಿಂಗ್) ಪಕ್ಷಿಗಳು ಹಿಂಡು ಹಿಂಡಾಗಿ ಆಗಮಿಸಿ ಹಣ್ಣಿನ ರುಚಿ ನೋಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ನೋಡಲು ಅತ್ಯಾಕರ್ಷಕವಾಗಿರುವ ಬೂದು ತಲೆಯ ಮೈನಾ ಪಕ್ಷಿಗಳು ಆಗ್ನೇಯ ಏಷ್ಯಾದಲ್ಲಿನ ಮರದ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತವೆ. ನಮ್ಮಲ್ಲಿ ಚಳಿಗಾಲದಲ್ಲಿ ಇವು ಕಾಣಿಸುತ್ತವೆ.
ಬೂದು ತಲೆಯ ಮೈನಾಗಳು ಸರ್ವಭಕ್ಷಕವಾಗಿದ್ದು, ಹಣ್ಣು, ಮಕರಂದ ಮತ್ತು ಕೀಟಗಳನ್ನು ತಿನ್ನುತ್ತವೆ. ಸದಾ ಹಿಂಡುಗಳಲ್ಲಿ ಹಾರುತ್ತವೆ. ಹಿಂಡಾಗಿಯೇ ಆಹಾರ ಅರಸುತ್ತವೆ. ಬೆಳಗ್ಗೆಯಿಂದ ಸಂಜೆವರೆಗೂ ಚಟುವಟಿಕೆಯಿಂದ ನಲಿದಾಡುವ ಬೂದು ತಲೆಯ ಮೈನಾಗಳ ಚಿಲಿ-ಪಿಲಿನಾದ ಮೈ-ಮನಕ್ಕೆ ಮುದ ನೀಡುತ್ತದೆ. ಬೆಳಗ್ಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ಹೋಗುವ ಮದಲನೆಯ ಗೇಟ್‌ಗೆ ಹೊಂದಿಕೊಂಡಿರುವ ಆಲದಮರದಲ್ಲಿ ಇವುಗಳನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಾರೆ ವನ್ಯಜೀವಿ ಛಾಯಾಚಿತ್ರಗಾರ ಮಾಲತೇಶ ಅಂಗೂರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net