

ಹಾವೇರಿ: ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಸಮಾಜದವರು ಸೋಮವಾರ ಜಿಲ್ಲೆಯಾದ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಮಕ್ಕಳು, ಹಿರಿಯರು ಹೊಸ ಬಟ್ಟೆ ಧರಿಸಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಎಲ್ಲರೂ ಪರಸ್ಪರ ಆಲಿಂಗನ ಮಾಡಿಕೊಂಡು ಈದ್ ಮುಬಾರಕ್ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಾವಿರಾರು ಜನರು ಆಗಮಿಸಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧರ್ಮ ಗುರುಗಳು ಧರ್ಮ ಸಂದೇಶ ನೀಡಿದರು. ಮುಸ್ಲಿಂ ಧರ್ಮದಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ್, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹುವಿನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ. ಅನಿವಾರ್ಯ ಸಂದರ್ಭದಲ್ಲಿ ದೇಶ, ಧರ್ಮ ಹಾಗೂ ಮಾನವ ಕುಲಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸನ್ನದ್ಧಗೊಳಿಸುವುದು ಈ ಹಬ್ಬದ ಆಚರಣೆಯ ಉದ್ದೇಶವಾಗಿದೆ ಎಂದರು.
ವಿಧಾನಸಭೆ ಉಪಸಭಾಪತಿ, ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಹಾವೇರಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಭುಗೌಡ ಬಿಸ್ಟನಗೌಡ್ರ, ಇತರರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಕೋರಿದರು.
ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ, ಉಪಾಧ್ಯಕ್ಷ ಚಮನ್ ಮುಲ್ಲಾ, ಅನ್ವರ್ ಕಡೇಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೆರಿ, ಖಜಾಂಚಿ ಗುಲಾಮ್ ಬಂಕಾಪುರ, ಸದಸ್ಯರಾದ ಇಮಾಮ್ ಹುಸೇನ್ ಬಾಯಿಬಾಯಿ, ಸಾದಿಕ್ ಸವಣೂರ, ಉಸ್ಮಾನ್‌ಸಾಬ್ ಪಟವೇಗಾರ, ಜಮೀರ್ ಜಿಗರಿ, ಇಸ್ಮಾಯಿಲ್ ಲಭ್ಯರ್, ವಸೀಮ್ ಸನ್ನುಖಾನ್, ಬಾಬುಲಾಲ್ ಬಾಲೇಬಾಯಿ, ಸುನೀಲ ಜಮಾದರ, ವಲಿ ಅತ್ತಾರ, ಅಮಿರಜಾನ್ ಬೇಪಾರಿ, ಹಜರತ್ ಅಲಿ ತಹಶೀಲ್ದಾರ್, ಗೌಸ್ ಹತ್ತಿ ಕಾಳ, ಸಾದಿಕ ಮುಲ್ಲಾ, ಮನ್ಸೂರ್ ಮುಲ್ಲಾ, ಖಮರ್ ಕಲ್ಯಾಣಿ, ನಪ್ತಾರ್ ಗುಡಗೇರಿ, ಇಕ್ಬಾಲ್ ಶಿಡಗನಾಳ, ಅಜಮತ್ ಶೇಖ್, ಖಾಸಿಂಸಾಬ್ ಅಗಡಿ, ಶಫಿ ಗೋಲಿಬಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.
ಸುರ್‌ಕುಂಬಾ ಸವಿದರು
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಕರು, ಸ್ನೇಹಿತರೊಂದಿಗೆ ಮುಸ್ಲಿಮರು ಸುರ್‌ಕುಂಬಾ ಸವಿದರು. ಜತೆಗೆ ಹಕೀಂ ಕೋಳಿ ಬಿರಿಯಾನಿ, ಮಟನ್ ಬಿರಿಯಾನಿ, ಮೀನು, ಪರೋಟಾ, ಮೊಟ್ಟೆ, ಚಪಾತಿ, ಕಲ್ಲಂಗಡಿ, ಸೇಬು ಸೇರಿ ವಿವಿಧ ಹಣ್ಣುಗಳನ್ನು ಸೇವಿಸಿ ಸಂಭ್ರಮಿಸಿದರು.