

ಹಾವೇರಿ: ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಇಲ್ಲಿನ ಬಸವೇಶ್ವರ ವೃತ್ತದಲ್ಲಿನ ಮುರುಘಾ ಮಠದ ಮೂಲ ಶಾಖಾ ಹೊಸಮಠದಲ್ಲಿ ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿಂದೆ ಇದೇ ಮಠದ ಪೀಠಾಧಿಕಾರಿಯಾಗಿದ್ದ ಮುರುಘಾಶ್ರೀಗಳು ಇದೀಗ ವಿಶ್ರಾಂತಿಗಾಗಿ ಹೊಸಮಠಕ್ಕೆ ಆಗಮಿಸಿದ್ದಾರೆ. ಮಠದಲ್ಲಿ ಪೂಜೆ, ಧ್ಯಾನ, ಪುಸ್ತಕ ಓದು, ಭಕ್ತರ ಭೇಟಿ ಮಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ.
ಸ್ವಾಮೀಜಿ ಮೌನವ್ರತ
ವಾತಾವರಣ ಬದಲಾಗಲಿ ಎಂಬ ಭಕ್ತರ ಅಪೇಕ್ಷೆ ಮೇರೆಗೆ ಶ್ರೀ ಮುರುಘಾ ಶರಣರು ಹಾವೇರಿಯ ಹೊಸಮಠಕ್ಕೆ ಆಗಮಿಸಿದ್ದಾರೆ. ಅವರು ಈ ಹಿಂದೆ ಇದೇ ಮಠದಲ್ಲಿದ್ದರು. ಹಾಗಾಗಿ, ಇದು ತವರು ಮನೆ ಇದ್ದಂತೆ. ತವರಿನ ಮಕ್ಕಳ ಕೋರಿಕೆಯಂತೆ ಬಂದಿದ್ದಾರೆ. ಮೌನ ಹಾಗೂ ಅಧ್ಯಯನದಲ್ಲಿದ್ದಾರೆ. ಆರೋಗ್ಯವಾಗಿದ್ದಾರೆ. ಎಂದಿನಂತೆ ಲಿಂಗಪೂಜೆ, ಯೋಗ, ಬೆಳಗಿನ ಪೂಜೆಯಲ್ಲಿ ನಿರತರಾಗಿದ್ದಾರೆ. ಅವರ ಮೇಲಿನ ಆರೋಪದ ಕುರಿತು ನ್ಯಾಯಾಲಯದಿಂದ ಅವರು ಮುಕ್ತರಾಗಿ ಬರುತ್ತಾರೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದರು.